
ಕೆಎಲ್ಇ ಸಂಸ್ಥೆ ಸೇವೆ ಅನನ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು

ಬೆಳಗಾವಿ : ವೈದ್ಯಕೀಯ ವೃತ್ತಿಗೆ ಅದರದೇ ಆದ ಘನತೆ ಮತ್ತು ಜವಾಬ್ದಾರಿ ಇದೆ. ವೃತ್ತಿಪರ ವೈದ್ಯರು ನಿಮ್ಮಲ್ಲಿಗೆ ಬರುವ ರೋಗಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಯಾವುದೇ ರೋಗಕ್ಕೆ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕು ಈ ಕಾರ್ಯವನ್ನು ಕೆಎಲ್ಇ ಸಂಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಶುಕ್ರವಾರ ಕೆಎಲ್ಇ ಸಂಸ್ಥೆಯ ಡಾ. ಸಂಪತ್‌ಕುಮಾರ್ ಶಿವಣಗಿ ನೂತನ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಗೊಳಿಸಿ ಮಾತನಾಡಿದ ಇವರು. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿರುವ ಕೆಎಲ್ಇ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ರಾಷ್ಟ್ರಕ್ಕೆ ಸಂಸ್ಥೆ ದೊಡ್ಡ ಕೊಡುಗೆ ನೀಡಿದೆ. ಸಕಾಲಿಕ ಚಿಕಿತ್ಸೆ ಹಾಗೂ ಕ್ಯಾನ್ಸರ್ ಮಹಾಮಾರಿ ಕುರಿತು ಅರಿವು ಮೂಡಿಸುವಲ್ಲಿ ಕೆಎಲ್ಇ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ. ಸಪ್ತ ಋಷಿಗಳಿಂದ ಪ್ರಾರಂಭವಾದ ಕೆಎಲ್ಇ ಶಿಕ್ಷಣ ಸಂಸ್ಥೆ ಸಧ್ಯ ಜಗತ್ತಿನಾದ್ಯಂತ ಮುನ್ನೂರಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ಹೊಂದಿದೆ. ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿಯ ಚಿಂತನೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಸಿಗುವಂತಾಗಿದೆ. ಆಸ್ಪತ್ರೆ ವೈದ್ಯರು ಜನರ ತೊಂದರೆ ನಿವಾರಣೆ ಮಾಡಿ ಅವರ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಲಿ ಎಂದು ಕಿವಿಮಾತು ಹೇಳಿದರು.
ಕೆಎಲ್ಇ ಸಂಪತ್ ಕುಮಾರ್ ಶಿವಣಗಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ರಾಷ್ಟ್ರಪತಿಗಳ ಅಮೃತ ಹಸ್ತದಿಂದ ಉದ್ಘಾಟನೆ ಆಗಬೇಕೆಂದು ಡಾ. ಪ್ರಭಾಕರ ಕೋರೆ ಹಾಗೂ ತಂಡದ ಉದ್ದೇಶವಾಗಿತ್ತು. ಇದರಂತೆ ರಾಷ್ಟ್ರಪತಿಗಳು ಬೆಳಗಾವಿ ನಗರಕ್ಕೆ ಆಗಮಿಸಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಮಾಡಿದ್ದು ಖುಷಿ ಸಂಗತಿ. ಬುಡಕಟ್ಟು ಜನಾಂಗದ ಪರವಾಗಿ ನಿರಂತರ ಹೋರಾಟ ನಡೆಸಿ ಅವರ ಪರವಾಗಿ ಧ್ವನಿಯಾಗಿ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ರಾಷ್ಟ್ರಪತಿಗಳು ಈ ದೇಶದ ಅಸ್ಮಿತೆ ಎಂದರು.
ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ. 108 ವರ್ಷಗಳ ಹಿಂದೆ ಸಪ್ತ ಋಷಿಗಳು ಹಾಕಿದ್ದ ಕೆಎಲ್ಇ ಎಂಬ ಬೀಜ ಈಗ ಬೃಹದಾಕಾರದ ಮರವಾಗಿ ಬೆಳೆದು ನಿಂತಿದೆ. 1996 ರಲ್ಲಿ ಅಂದಿನ ಪ್ರಧಾನಿ ಪಿ.ವ್ಹಿ ನರಸಿಂಹರಾವ್ ಅವರ ಅಮೃತ ಹಸ್ತದಿಂದ ಕೆಎಲ್ಇ ಆಸ್ಪತ್ರೆ ಉದ್ಘಾಟನೆಗೊಂಡಿತ್ತು. ಈಗ ನಾಲ್ಕು ಸಾವಿರ ಹಾಸಿಗೆ ಹೊಂದಿರುವ ಆಸ್ಪತ್ರೆಯಲ್ಲಿ ಒಂದು ಸಾವಿರ ಬೆಡ್ ಗಳು ಬಡವರಿಗಾಗಿ ಮೀಸಲಿಡಲಾಗಿದ್ದು, ಸಮಾಜದ ಬಡವರ ಪಾಲಿಗೆ ಕೆಎಲ್ಇ ಸಂಸ್ಥೆ ಸಂಜೀವಿನಿ ಆಗಿದೆ ಎಂದರು.
ಸಧ್ಯ ಕೆಎಲ್ಇ ಜಗತ್ತಿನಾದ್ಯಂತ 310 ಅಂಗ ಸಂಸ್ಥೆಗಳನ್ನು ಹೊಂದಿದ್ದು 1 ಲಕ್ಷ 42 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆರೋಗ್ಯ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ದೇಶದ ಅತ್ಯಂತ ಯಶಸ್ವಿ ವ್ಯಕ್ತಿಗಳು ಕೆಎಲ್ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ನಮ್ಮ ಸಂಸ್ಥೆ ಯಾವತ್ತೂ ಹಿಂದೆ ಬಿದ್ದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ಸಂಸದ ಜಗದೀಶ್ ಶೆಟ್ಟರ್, ಕೆಎಲ್ಇ ಸಂಸ್ಥೆ ಅಧ್ಯಕ್ಷ ಮಹಾಂತೇಶ್ ಕೌಜಲಗಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಠಗಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.