ವದಂತಿಗೆ ಕಿವಿಗೊಡದಂತೆ ಯಲ್ಲಮ್ಮ ಭಕ್ತರಿಗೆ ಎಸ್ಪಿ ಮನವಿ
ಬೆಳಗಾವಿ : ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಹೊರ ರಾಜ್ಯದ ಭಕ್ತರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಸ್ಪಷ್ಟ ಪಡಿಸಿದರು.
ಸವದತ್ತಿ ಯಮ್ಮಲ್ಲನ ಕ್ಷೇತ್ರದಲ್ಲಿ ಕೆಲ ಭಕ್ತಾಧಿಗಳ ಮೇಲೆ ಹಲ್ಲೆ ನಡೆದಿದೆ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕುರಿತು ಬುಧವಾರ ಎಸ್ಪಿ ಕಚೇರಿಯಲ್ಲಿ ಸ್ಪಷ್ಟನೆ ನೀಡಿದ ಸಂಜೀವ್ ಪಾಟೀಲ್, ಕೆಲವು ಸೋಷಿಯಲ್ ಮೀಡಿಯಾದಲ್ಲಿ ಬೆಳಗಾವಿ ಬಂದಂತಹ ಭಕ್ತಾದಿಗಳ ಮೇಲೆ ಹಲ್ಲೆ ನಡೆದಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಆದರೆ, ಸವದತ್ತಿ ಹಾಗೂ ಗೊಡಚಿ ಜಾತ್ರೆಗೆ ಬಂದಂತಹ ಭಕ್ತಾದಿಗಳ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಯಾವುದೇ ತೊಂದರೆಯಾಗಿಲ್ಲ. ಎರಡೂ ಕ್ಷೇತ್ರದಲ್ಲಿ ಸುಗಮನವಾಗಿ ಉತ್ಸವ ಹಾಗೂ ಜಾತ್ರೆ ನಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಯಾರೂ ಕೂಡ ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಮೂಲಗಳಿಂದ ಕೇಳಿ ಬರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ಇನ್ನು ಖುದ್ದು ಬುಧವಾರ ಬೆಳಿಗ್ಗೆ ಸವದತ್ತಿಗೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ ವರಿಷ್ಠಾಧಿಕಾರಿಗಳು, ಅಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಎಂದಿನಂತೆ ಪೂಜೆ ಪುಣಸ್ಕಾರಗಳು ನಡೆದಿವೆ. ಬೇರೆ ರಾಜ್ಯ ಹಾಗೂ ನಮ್ಮ ರಾಜ್ಯದ ಬೇರೆ ಜಿಲ್ಲೆಯಿಂದ ಬಂದಂತಹ ಭಕ್ತಾದಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲು 500 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮೂರು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಮಹಾರಾಷ್ಟ್ರದಿಂದ ಬಂದಂತಹ ಭಕ್ತಾದಿಗಳಿಗೆ ದೇವಿ ಪೂಜೆ ಸಲ್ಲಿಸಿ, ವಾಪಾಸ್ಸು ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ದೈನಂದಿನ ಕೆಲಸಕ್ಕಾಗಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹಾಗೂ ಮಹಾರಾಷ್ಟ್ರದಿಂದ ಬೆಳಗಾವಿ ನಡುವೆ ನಿತ್ಯ ಓಡಾಡುತ್ತಿರುವುದು ಎಂದಿನಂತೆ ಯಾವುದೇ ವ್ಯತ್ಯಯ ಇಲ್ಲದೆ ನಡೆಯುತ್ತಿದೆ. ಆದರೆ, ಬಸ್ ಗಳ ಸಂಚಾರದ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಅದು ಕೂಡ ಎಂದಿನಂತೆ ಶುರುವಾಗಲಿದೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ