Select Page

Advertisement

ಸಾಹುಕಾರ್ ತಂತ್ರಕ್ಕೆ ಡೋಂಟ್ ಕೇರ್ ಎಂದ ಲಕ್ಷ್ಮೀ ಹೆಬ್ಬಾಳ್ಕರ್ : ಭವ್ಯ ಶಿವಾಜಿ ಮೂರ್ತಿ ಉದ್ಘಾಟನೆಗೆ ಸಿದ್ಧತೆ

ಸಾಹುಕಾರ್ ತಂತ್ರಕ್ಕೆ ಡೋಂಟ್ ಕೇರ್ ಎಂದ ಲಕ್ಷ್ಮೀ ಹೆಬ್ಬಾಳ್ಕರ್ : ಭವ್ಯ ಶಿವಾಜಿ ಮೂರ್ತಿ ಉದ್ಘಾಟನೆಗೆ ಸಿದ್ಧತೆ

ಬೆಳಗಾವಿ: ಭಾನುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಕೇಂದ್ರ ರಾಜಹಂಸಗಡ ಕೋಟೆಯ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಲೋಕಾರ್ಪಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜಹಂಸಗಡನಲ್ಲಿರುವ ಕ್ಷೇತ್ರಪಾಲಕ ಶ್ರೀ ಸಿದ್ಧೇಶ್ವರ ದೇವರಿಗೆ ವಿಶೇಷ ಪೂಜೆ, ಹೋಮ ಹವನ, ಅಭಿಷೇಕ ಸೇರಿದಂತೆ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ ಮಧ್ಯಾಹ್ನದವರೆಗೂ ನಡೆದವು.

ಭಾನುವಾರ ಬೆಳಗ್ಗೆ 9 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ. ಪಾಲಕಿ ಉತ್ಸವ, ಸಾಂಪ್ರದಾಯಿಕ ಹಾಲಗಿ ಕಾರ್ಯಕ್ರಮಗಳು ನಡೆಯಲಿವೆ. 10 ಗಂಟೆಗೆ ದೇವಸ್ಥಾನ ಪ್ರವೇಶವಾಗಲಿದೆ. 10.30ರಿಂದ ಧ್ವಜಾರೋಹಣ, ಉತ್ಸವ ಮೂರ್ತಿ ಪೂಜಾ, ಡೋಲ್ ತಾಶಾದೊಂದಿಗೆ ಮೂರ್ತಿ ಉದ್ಘಾಟನೆಯಾಗಲಿದೆ.

ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ವಿಧಾನಸಭೆ ಪ್ರತಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸತೇಜ್ (ಬಂಟಿ) ಪಾಟೀಲ, ಖ್ಯಾತ ಮರಾಠಿ ನಟ ಹಾಗೂ ಲೋಕಸಭಾ ಸದಸ್ಯ ಡಾ. ಅಮೋಲ್ ಕೋಲ್ಲೆ, ಲಾತೂರು ಗ್ರಾಮೀಣ ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ ದೇಶಮುಖ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾನುವಾರ ಸಂಜೆ 5.30ರಿಂದ 6.30ರ ವರೆಗೆ ಪೋವಾಡಾ, 6.30ರಿಂದ 7.30ರವರೆಗೆ ಡೋಲ್ ತಾಶಾ, 7.30ರಿಂದ ಲೇಸರ್ ಶೋ ಮತ್ತು ಕ್ರ್ಯಾಕರ್ ಶೋಗಳ ಮೂಲಕ ಮೂರ್ತಿಗೆ ಗೌರವ ಸಲ್ಲಿಸುವುದು, 8.30ರಿಂದ ಸನ್ಮಾನ ಸಮಾರಂಭ ಹಾಗೂ ಮರದಾನಿ ಖೇಳ ಮೊದಲಾದ ಪಾರಂಪರಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವಾರು ಗಣ್ಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟಾರೆ ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ನಾಳೆಯ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದ್ದಾರೆ

Advertisement

Leave a reply

Your email address will not be published. Required fields are marked *