ಷಡ್ಯಂತ್ರ ಮಾಡುವ ಅವಶ್ಯಕತೆ ನಮಗಿಲ್ಲ : ಸಾಹುಕಾರ್ ಗೆ ಟಾಂಗ್ ಕೊಟ್ರಾ ಸಚಿವೆ ಹೆಬ್ಬಾಳಕರ್
ಕಲಬುರಗಿ : ಮುನಿರತ್ನ ಪ್ರಕರಣದಲ್ಲಿ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಆದರೆ ಇದೇ ವಿಚಾರಕ್ಕೆ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದು ಪರೋಕ್ಷವಾಗಿ ಸಾಹುಕಾರ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಬಂಧನ ಕಾಂಗ್ರೆಸ್ ಷಡ್ಯಂತ್ರ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷಕ್ಕೆ ಷಡ್ಯಂತ್ರ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ರೀತಿ ಕಾಂಗ್ರೆಸ್ ಷಡ್ಯಂತ್ರ ಮಾಡಿದರೆ, ಕರ್ನಾಟಕದ ಜೈಲುಗಳು ಸಾಕಾಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಷಡ್ಯಂತ್ರ, ಸೇಡಿನ ರಾಜಕಾರಣ ಮಾಡುವುದು, ಬಿಜೆಪಿಯವರ ಚಾಳಿ. ಮಾಜಿ ಮಂತ್ರಿಯಾದವರು ಮಹಿಳೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ರಾಜಕಾರಣಿಗಳು ಅಂದ ಮೇಲೆ ನಮ್ಮನ್ನು ಸಾವಿರ ಜನ ಅನುಕರಣೆ ಮಾಡುತ್ತಾರೆ. ನಮ್ಮ ಜವಾಬ್ದಾರಿ ಏನು ಅಂತ ತಿಳಿದುಕೊಂಡು ಮಾತಾಡಬೇಕು. ಹೆಣ್ಣು ಮಕ್ಕಳ ಬಗ್ಗೆ ಮಾತಾಡುವಾಗ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಎಂದು ಸಚಿವರು ಹೇಳಿದರು.
ನಾಗಮಂಗಲ ಗಲಭೆಗೆ ಕೇರಳ ಲಿಂಕ್ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 60 ಸಾವಿರ ಗಣೇಶ ಮಂಡಳಿಗಳಿವೆ. ಇಂತಹ ಘಟನೆಗಳು ಆಗಬಾರದು. ನಾನು ಯಾವುದೇ ಕೋಮಿಗಾಗಲಿ, ಯಾವುದೇ ಜಾತಿಗಾಗಲಿ ಇಂತಹುದಕ್ಕೆ ಬೆಂಬಲ ನೀಡುವುದಿಲ್ಲ ಎಂದರು.
ಇಂಥ ಘಟನೆಗಳನ್ನು ನಾವು ಖಂಡಿಸುತ್ತೇವೆ. ಪಕ್ಷಾತೀತವಾಗಿ ಯಾವುದೇ ಕೋಮಿನವರಾಗಲಿ ನಮ್ಮ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತೆ. ನಾಗಮಂಗಲ ಘಟನೆಯಲ್ಲಿ ಯಾವುದೇ ಲಿಂಕ್ ಇಲ್ಲ. ಪೂರ್ವ ಯೋಜಿತವೂ ಅಲ್ಲ, ಯಾವುದೇ ಪ್ರೀ
ಪ್ಲ್ಯಾನ್ ಇಲ್ಲ. ಯಾರೂ ದೊಡ್ಡ ಕಥೆ ಕಟ್ಟೋದು ಬೇಡ, ಎರಡು ಗುಂಪುಗಳ ಮಧ್ಯೆ ಘರ್ಷಣೆ ಆಗಿದೆಯಷ್ಟೆ. ಈಗಾಗಲೇ ನಮ್ಮ ಸರ್ಕಾರ ಕ್ರಮಕೈಗೊಂಡಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಏನು ಹೇಳಿದ್ದರು ಮಾಜಿ ಸಚಿವ ರಮೇಶ್ ಜಾರಕಿಹೊಳಿ :
ಚಿಕ್ಕೋಡಿ : ಬಿಜೆಪಿ ಶಾಸಕ ಮುನಿರತ್ನ ಬಂಧನದ ಹಿಂದೆ ಸಿಡಿ ಶಿವು ಇದ್ದಾನೆ. ರಾಜಕೀಯ ವಿರೋಧಿಗಳನ್ನು ಈ ರೀತಿ ಷಡ್ಯಂತ್ರದಿಂದ ಮುಗಿಸುವುದೇ ಅವನ ಕಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಸೋಮವಾರ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆ ನಂತರ ಪ್ರತಿಕ್ರಿಯೆ ನೀಡಿದ ಇವರು.
ಶಾಸಕ ಮುನಿರತ್ನ ದಲಿತರಿಗೆ ಹಾಗೂ ಒಕ್ಕಲಿಗರ ಕುರಿತು ಆಡಿರುವ ಮಾತಿನ ಆಡಿಯೋ ಸತ್ಯಾಸತ್ಯತೆ ಹೊರಬರಬೇಕು.
ಆದರೆ ಸಿಡಿ ಶಿವು ಅವನ ವಿರೋಧಿಗಳನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಿದ್ದಾನೆ. ಇವರ ಕುತಂತ್ರಕ್ಕೆ ಮೊದಲು ಬಲಿಯಾಗಿದ್ದು ನಾನು, ನಂತರ ದೇವೆಗೌಡರ ಕುಟುಂಬ, ಈಗ ಮುನಿರತ್ನ ಆಗಿದ್ದಾರೆ ಎಂದರು.
ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರೇ ನೋವು ಅನುಭವಿಸುತ್ತಿದ್ದಾರೆ. ಇನ್ನುಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಹೊರಬರುತ್ತವೆ. ಸಧ್ಯ ಸಿಡಿ ಕುರಿತಾದ ತನಿಖೆಯನ್ನು ಸಿಬಿಐ ಗೆ ನೀಡಬೇಕಾಗಿದೆ. ದ್ವೇಷದ ರಾಜಕಾರಣದಿಂದ ಜಾತಿ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರದಾನಿ ನರೇಂದ್ರ ಮೋದಿಯವರೇ ಸಿಬಿಐ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿಕೊಂಡರು.

