ನಾವು ಗಂಡಸರಿದ್ದೀವಿ – ಎಂಇಎಸ್ ಗೆ ಲಕ್ಷಣ ಸವದಿ ಖಡಕ್ ಎಚ್ಚರಿಕೆ
ಅಥಣಿ : ರಾಜ್ಯದ ನೆಲ, ಜಲ ವಿಷಯದಲ್ಲಿ ನಾವೆಲ್ಲರೂ ಒಂದೇ. ಎಂಇಎಸ್ ತನ್ನ ನೆಲೆ ಉಳಿಸಿಕೊಳ್ಳಲು ಕೆಲವು ಕಡೆ ಪುಂಡಾಟಿಕೆ ಮೆರೆಯುತ್ತಿದೆ. ಇಲ್ಲಿಯೂ ನಾವೆಲ್ಲ ಗಂಡಾರಿದ್ದು ಎಂಇಎಸ್ ಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಮಾಜಿ ಡಿಸಿಎಂ ಲಕ್ಷಣ ಸವದಿ ಅಭಿಪ್ರಾಯಪಟ್ಟರು.
ತಾಲೂಕಿನ ನದಿ ಇಂಗಳಗಾಂವ – ತೀರ್ಥ ಗ್ರಾಮದ ಸಂಪರ್ಕಿಸುವ 4.96 ಲಕ್ಷ ರೂಪಾಯಿ ವೆಚ್ಚದ ಬ್ರಿಡ್ಜ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಇವರು.
ಹಲವಾರು ವರ್ಷಗಳಿಂದ ಎಂಇಎಸ್ ಪುಂಡಾಟಿಕೆಯನ್ನು ಮುಂದುವರಿಸಿದೆ. ಸದ್ಯ ಎಂಇಎಸ್ ಎಂಬುವುದು ಸತ್ತ ಹೆಣವಾಗಿದ್ದರಿಂದ, ಅದನ್ನು ಜೀವಂತ ಗೊಳಿಸಲು ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಕೆಲವರು ಪ್ರಯತ್ನ ಪಡುತ್ತಿದ್ದು ಇದಕ್ಕೆ ಯಾರು ಸೊಪ್ಪು ಹಾಕುವ ಅವಶ್ಯಕತೆ ಇಲ್ಲ ಎಂದರು.
ಗಡಿ ವಿವಾದ ವಿಚಾರವಾಗಿ ಉಭಯ ರಾಜ್ಯಗಳ ನಡುವೆ ಗೊಂದಲ ಉಂಟಾಗಿದೆ. ವ್ಯಾಪಾರ ವಹಿವಾಟು ಇನ್ನಿತರ ಮೇಲೆ ಪರಿಣಾಮ ಬೀರುತ್ತಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹಾಗೆಯೇ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 44 ಗ್ರಾಮಗಳು ಕರ್ನಾಟಕ್ಕೆ ಸೇರಲು ಹಿಂದಿನಿಂದಲೂ ಬೇಡಿಕೆ ಇವೆ. ಆದರೆ ಅವರಿಗೆ ಅಲ್ಲಿನ ಸರ್ಕಾರ ಮೂಲಭೂತ ಸೌಕರ್ಯ ನೀಡಿಲ್ಲವೆಂದು ಕರುನಾಡಿಗೆ ಆಗಮಿಸುತ್ತಿದ್ದಾರೆ. ಅಲ್ಲಿನ ಸರ್ಕಾರ ಮೂಲಭೂತ ಸೌಕರ್ಯ ನೀಡಲಿ ಎಂದು ಒತ್ತಾಯಿಸಿದರು.