ಸೇನಾ ವಾಹನ ಅಪಘಾತ ; ಕೊಡಗಿನ ಯೋಧ ಹುತಾತ್ಮ
ಮಡಿಕೇರಿ : ಜಮ್ಮು ಕಾಶ್ಮೀರದಲ್ಲಿ ಕಳೆದ ವಾರ ಸಂಭವಿಸಿದ್ದ ಸೇನಾ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ
ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರ ಗ್ರಾಮದ ಸೈನಿಕ 28 ವರ್ಷದ ಪಳಂಗೋಟಿ ದಿವಿನ್ ಕೊನೆ ಉಸಿರು ಎಳೆದಿದ್ದಾರೆ.
ಜಮ್ಮು ಕಾಶ್ಮೀರ ಸೇನಾ ವಾಹನ ಅಪಘಾತದಲ್ಲಿ ಸಾವಿನ ಸಂಖ್ಯೆ 6 ಕ್ಕೆ ಏರಿಕೆಯಾಗಿದ್ದು ಈವರೆಗೆ ನಾಲ್ವರು ಕನ್ನಡಿಗರು ಮೃತಪಟ್ಟಿದ್ದಾರೆ. ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ದಾಕಲಾಗಿದ್ದ ದಿವಿನ್ ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿದ್ದಾರೆ.
ದಿವಿನ್ ತಾಯಿ ಜಯ ಕೂಡ ಗುರುವಾರ ಸೇನಾ ಆಸ್ಪತ್ರೆ ತಲುಪಿದ್ದರು. ಅಮ್ಮನ ಕರೆಗೆ ದಿವಿನ್ ಹುಬ್ಬು ಹಾರಿಸಿ ಸ್ಪಂದಿಸಿದ್ದರು. ಆದರೆ ಶ್ವಾಸಕೋಶಕ್ಕೆ ತೀವ್ರ ಹಾನಿ ಆಗಿದ್ದ ಹಿನ್ನಲೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಧಿವಿನ್ ಕೊನೆಯುಸಿರು ಎಳೆದಿದ್ದಾರೆ.
ತಂದೆ ಪ್ರಕಾಶ್ ತಾಯಿ ಜಯ ಅವರ ಏಕೈಕ ಮಗನಾಗಿದ್ದ ಧಿವಿನ್ 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ವಿವಾಹ ನಿಶ್ಚಿತಾರ್ಥ ಕೂಡ ನೆರವೇರಿದ್ದು ಇದೇ ಫೆಬ್ರುವರಿಯಲ್ಲಿ ದಿವಿನ್ ವಿವಾಹವಾಗಬೇಕಿತ್ತು. ಆದರೆ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಅದರಲ್ಲಿ ಇದ್ದ 4 ಸೈನಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದರು.

