ಬೆಂಗಳೂರು : ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ಕೇಳಿಬಂದಿದ್ದ ಮೊಟ್ಟೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕುರಿತು ಮರು ತನಿಖೆಗೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಮುಡಾ ಪ್ರಕರಣದ ಕುರಿತು ಮೈಸೂರು ಪಾದಯಾತ್ರೆ ಮೂಲಕ‌ ಕಾಂಗ್ರೆಸ್ ಕಟ್ಟಿಹಾಕಲು ಯಶಸ್ವಿಯಾಗಿದ್ದ ಬಿಜೆಪಿ ನಾಯಕರ ವಿರುದ್ಧ ಈ ಹಿಂದೆ ಕೇಳಿಬಂದ ಭ್ರಷ್ಟಾಚಾರ ಆರೋಪಗಳ ಮರು ತನಿಖೆಗೆ ಸಿಎಂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಮರು ತನಿಖೆ ಮೂಲಕ ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರ ಆರೋಪಳನ್ನು ಜನರಿಗೆ ಮುಟ್ಟಿಸುವ ನಿರ್ಣಯ ಕೈಗೊಂಡಿದ್ದಾರೆ.

ಈ ಹಿಂದೆ ಬಿಜೆಪಿ ಅವಧಿಯಲ್ಲಿ ಅನೇಕ ನಾಯಕರ ವಿರುದ್ಧ ತನಿಖೆಗೆ ಆದೇಶಿಸುವಂತೆ ರಾಜ್ಯಪಾಲರ ಬಳಿ ಮನವಿ ಮಾಡಿದ್ದರು ತನಿಖೆಗೆ ಆದೇಶ ನೀಡಿರಲಿಲ್ಲ. ಆದರೆ ಸಧ್ಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಕೇಂದ್ರ ಸಚಿವ ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಮುರುಗೇಶ ನಿರಾಣಿ ವಿರುದ್ಧ ಭ್ರಷ್ಟಾಚಾರ ಆರೋಪದ ವಿರುದ್ಧ ಕಾನೂನು ತನಿಖೆಗೆ ಕಾಂಗ್ರೆಸ್ ನಿರ್ಧರಿಸಿದೆ.

ಸಧ್ಯ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಈ ಕುರಿತು ಸಿಎಂ ಹೈಕೋರ್ಟ್ ಮೊರೆ ಹೋಗಲಿದ್ದು ತಮ್ಮ ವಿರುದ್ಧ ತನಿಖೆಗೆ ಆದೇಆ ಹೊರಡಿಸಿರುವ ಕುರಿತು ಪರಾಮರ್ಶೆ ಮಾಡುವಂತೆ ವಾದ ಮಾಡಲಿದ್ದಾರೆ. ಇನ್ನೂ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿವೆ.