ಎಂಇಎಸ್ ನಾಯಕರ ಗಡಿಪಾರು ಮಾಡುವಂತೆ ಕರವೇ ಆಗ್ರಹ
ಬೆಳಗಾವಿ : ಗಡಿ ಭಾಗದಲ್ಲಿ ಅನವಶ್ಯಕವಾಗಿ ಸಾರ್ವಜನಿಕರ ಮಧ್ಯೆ ಭಾಷಾ ವೈಷಮ್ಯ ಮೂಡಿಸಿ ಶಾಂತಿ ಕದಡುವ ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಅವರನ್ನು ಗಡಿಪಾರು ಮಾಡುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಆಗ್ರಹಿಸಿದ್ದಾರೆ.
ಕನ್ನಡಿಗರು ಸಡಗರದಿಂದ ಆಚರಿಸುವ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಕರಾಳ ದಿನ ಆಚರಣೆ ಮಾಡಲಾಗುತ್ತದೆ. ಇನ್ನೂ ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮಹಾ ಮೇಳಾವ್ ಹೆಸರಿನಲ್ಲಿ ಎಂಇಎಸ್ ಪುಂಡಾಟಿಕೆ ಮೆರೆಯುತ್ತದೆ. ಇದರಿಂದ ಕಾನೂನು ಸುವ್ಯವಸ್ಥೆ ಹದೆಗೆಡುತ್ತಿದ್ದು, ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ.
ಪದೇ ಪದೇ ಶಾಂತಿ ಭಂಗ ಮಾಡುತ್ತಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತವಾಗಿ ಬಂಧಿಸಿ ಅವರನ್ನು ಗಡಿಪಾರು ಮಾಡುವ ಮೂಲಕ ಸರ್ಕಾರ ಕನ್ನಡದ ಹಿತವನ್ನು ಕಾಯಬೇಕು, ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ನಿರ್ಣಯವನ್ನು ಕೈಗೊಳ್ಳಬೇಕೆಂದು ದೀಪಕ ಗುಡಗನಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಎಂಇಎಸ್ ಸಂಘಟನೆಗೆ ನಾಡದ್ರೋಹಿ ಚಟುವಟಿಕೆ ಮಾಡಲು ಅನುಮತಿ ನೀಡುವದಿಲ್ಲ ಎಂದು ಹೇಳಿ ಜಿಲ್ಲಾಡಳಿತ ಅವಕಾಶ ನೀಡುತ್ತಿದೆ. ಒಂದುವೇಳೆ ಮಹಾ ಮೇಳಾವ್ ಗೆ ಅವಕಾಶ ಕಲ್ಪಿಸಿದರೆ ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಕರವೇ ಬೃಹತ್ ಪ್ರತಿಭಟನೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.