ಕೈದಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಆಯೋಜನೆ
ಬೆಳಗಾವಿ : ಜೈಲಿನಲ್ಲಿ ಬಂಧಿಯಾದ ಕೈದಿಗಳ ಕೌಶಲ್ಯ ಅಭಿವೃದ್ಧಿ ವೃದ್ಧಿಸುವ ನಿಟ್ಟಿನಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ, ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತಾ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಹಿಂಡಲಗಾ ಕಾರಾಗೃಹದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಬಸವ ಪ್ರಭು ಹಿರೇಮಠ ಮಾತನಾಡಿ.
ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯದ 08 ಕೇಂದ್ರ ಕಾರಾಗೃಹಗಳಲ್ಲಿ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಇದೇ ರೀತಿಯಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹದ ಕೈದಿಗಳಿಗೆ ಬೇಕರಿ ಮತ್ತು ಟೇಲರಿಂಗೆ ತರಬೇತಿ ನೀಡಲಾಗುವುದು.
ಮೂರು ತಿಂಗಳ ಅವಧಿಗೆ ಈ ತರಬೇತಿ ನಡೆಯಲಿದ್ದು ಸ್ವಾವಲಂಬಿ ಜೀವನ ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ. ಮುಖ್ಯ ಅಧೀಕ್ಷ ಕೃಷ್ಣಕುಮಾರ ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಈ ಕಾರ್ಯಕ್ರಮವು ಆಯೋಜಿಸಿದ್ದು ಖುಷಿ ಸಂಗತಿ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಎಮ್.ಎಚ್ ಆಶೇಖಾನ್ ಮಾತನಾಡಿ. ಕೈದಿಗಳು ತಮ್ಮ ಬದುಕಿನಲ್ಲಿ ಉಂಟಾದ ಕೆಟ್ಟ ಘಟನೆಯಲ್ಲಿ ಸಿಲುಕಿ ಜೈಲಿಗೆ ಬಂದಿರಬಹುದು. ಆದರೆ ಬದುಕಿನಲ್ಲಿ ಕೌಶಲ್ಯ ಕಂಡುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಈ ರೀತಿಯ ತರಬೇತಿಗಳು ಅನುಕೂಲ ಆಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಶಹಾಬುದ್ಧಿನ್ ಕೆ, ನಾಗರಾಜ ವಿ.ಎಚ್, ಸುಭಾಷ್ ಗೌಡರ, ವಿಜಯಾ ನೇಸರಗಿ, ಜೈಲರಾದ, ಬಸವರಾಜ ಭಜಂತ್ರಿ, ಬೋಧಕರಾದ ವಿನಯ ಮಲ್ಲೋಳ್ಳಿ ಹಾಗೂ ಎಸ್.ಎಸ್.ಯಾದಗುಡೆ ಉಪಸ್ಥಿತರಿದ್ದರು. ಶಶಿಕಾಂತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.