ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) (Chennamma Deve Gowda) ಅವರು ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಚೆನ್ನಮ್ಮ ಅವರು ಮೂಲತಃ ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿಯವರು. ಹಳೆಕೋಟೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. 1954ರಲ್ಲಿ ಎಚ್.ಡಿ. ದೇವೇಗೌಡರ ಜತೆ ಇವರ ವಿವಾಹ ನಡೆಯಿತು. ಈ ದಂಪತಿಗೆ ಎಚ್. ಡಿ. ಬಾಲಕೃಷ್ಣಗೌಡ, ಎಚ್. ಡಿ. ರೇವಣ್ಣ, ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರಮೇಶ್ ಹಾಗೂ ಪುತ್ರಿಯರಾದ ಅನಸೂಯ ಮತ್ತು ಶೈಲಜಾ ಸೇರಿ ಆರು ಮಕ್ಕಳಿದ್ದಾರೆ.

ಚೆನ್ನಮ್ಮ ಅವರು ರಾಜಕೀಯದ ಗೋಜಿಗೆ ಹೋಗದೆ, ದೇವೇಗೌಡರ ರಾಜಕೀಯ ಏಳು-ಬೀಳುಗಳಲ್ಲಿ ಮತ್ತು ಸಾಂಸಾರಿಕ ಜೀವನದಲ್ಲಿ ಜೊತೆಯಾಗಿ ನಿಂತು ಕುಟುಂಬವನ್ನು ನಿರ್ವಹಿಸಿದವರು. ದೇವೇಗೌಡರು ರಾಜಕೀಯದಲ್ಲಿ ಸಕ್ರಿಯರಾಗಿದ್ದ ಕಾಲದಲ್ಲಿ ಚೆನ್ನಮ್ಮ ಅವರು ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಗಂಡನಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದರು. ಇವರ ತ್ಯಾಗ ಮತ್ತು ತಾಳ್ಮೆಯನ್ನು ಸ್ವತಃ ದೇವೇಗೌಡರು ಹಲವು ಸಂದರ್ಭಗಳಲ್ಲಿ ಭಾವುಕರಾಗಿ ಸ್ಮರಿಸಿಕೊಂಡಿದ್ದಾರೆ.

ಜೀವನದ ಪ್ರತಿ ಹಂತದಲ್ಲೂ ದೇವೇಗೌಡರಿಗೆ ಹೆಜ್ಜೆಗೆ ಹೆಜ್ಜೆಯಾಗಿ ನಿಂತ ಪತ್ನಿಯನ್ನು ಕಂಡರೆ ದೇವೇಗೌಡರಿಗೆ ಅಗಾಧವಾದ ಪ್ರೀತಿ. ಇಳಿ ವಯಸ್ಸಿನಲ್ಲೂ ದೇವಸ್ಥಾನ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕಿದ್ದರೂ ಅವರು ಒಟ್ಟಿಗೆ ಓಡಾಡುತ್ತಿದ್ದರು. ಕೊನೆ ಕ್ಷಣದಲ್ಲೂ ದೇವೇಗೌಡ ಅವರೇ ಪತ್ನಿಯನ್ನು ಖುದ್ದಾಗಿ ಆಸ್ಪತ್ರೆಗೆ ದಾಖಲಿಸಿದ್ದರು.