ಮದುವೆಯಾಗಿ 15 ದಿನದಲ್ಲೇ ಅಪಘಾತದಿಂದ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೈಸೂರು ತಾಲೂಕಿನ ಮೂಗನಹುಂಡಿ ಸಮೀಪ ರಸ್ತೆಗೆ ಅಡ್ಡ ಬಂದ ಕಾಡುಹಂದಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ನವವಿವಾಹಿತೆ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಕನಹುಂಡಿ ಗ್ರಾಮದ ಮೇಘನಾ (20) ಮೃತಪಟ್ಟವರು. ಇವರಿಗೆ 15 ದಿನಗಳ ಹಿಂದಷ್ಟೇ ನಂಜನಗೂಡು ತಾಲೂಕಿನ ಬಿದರಗೂಡು ಗ್ರಾಮದ ಪುನೀತ್ ಅವರೊಂದಿಗೆ ವಿವಾಹವಾಗಿತ್ತು.
ದಂಪತಿ ಗುರುವಾರ ಮೂಗನಹುಂಡಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ ಊಟ ಮುಗಿಸಿ ಸುಮಾರು 9.30ರ ವೇಳೆಗೆ ಬೈಕ್‌ನಲ್ಲಿ ಊರಿಗೆ ವಾಪಸಾಗುತ್ತಿದ್ದರು. ಮೂಗನಹುಂಡಿ ಸಮೀಪ ರಸ್ತೆಗೆ ಏಕಾಏಕಿ ಕಾಡುಹಂದಿ ಅಡ್ಡ ಬಂದಿದೆ.
ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿದೆ. ಅಪಘಾತದ ರಭಸಕ್ಕೆ ಇಬ್ಬರೂ ಬೈಕ್ನಿಂದ ಬಿದ್ದರು. ಹೆಲ್ಲೆಟ್ ಧರಿಸಿಕೊಳ್ಳದ್ದರಿಂದ ಮೇಘನಾ ತಲೆಗೆ ಗಂಭೀರ ಗಾಯಗಳಾದವು. ಸಂಬಂಧಿಕರು ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೇಘನಾ ಮೃತಪಟ್ಟರು. ಪುನೀತ್ ತಲೆ, ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



