ಅಥಣಿ : ಮನುಷ್ಯನನ್ನು ಶ್ರೇಷ್ಠನನ್ನಾಗಿ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಜೀವ ವಿಕಾಸದಲ್ಲಿ ಮನುಷ್ಯನಿಗೆ ಇತರ ಜೀವಿಗಳಂತೆ ಅಪಾರ ದೈಹಿಕ ಶಕ್ತಿ, ವೇಗ ಅಥವಾ ಆಕರ್ಷಕ ಬಣ್ಣಗಳಿಲ್ಲ. ಆದರೆ ಬುದ್ಧಿವಂತಿಕೆ ಮತ್ತು ಆ ಬುದ್ಧಿಗೆ ಬೆಳಕು ನೀಡುವ ಶಿಕ್ಷಣದ ಮೂಲಕ ಮನುಷ್ಯ ಇತರ ಜೀವಿಗಳಿಗಿಂತ ವಿಶಿಷ್ಟನಾಗಿದ್ದಾನೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶುಕ್ರವಾರ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದ ಉನ್ನತೀಕರಿಸಿದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಸಂಕಷ್ಟಗಳು ಎದುರಾದಾಗ, ನಮ್ಮವರು ದೂರವಾದಾಗ ಹಾಗೂ ಕತ್ತಲೆಯ ಹಾದಿಯಲ್ಲಿ ಸಾಗಬೇಕಾದಾಗ ಮನುಷ್ಯನೊಳಗಿನ ಜ್ಞಾನವೇ ದಾರಿದೀಪವಾಗುತ್ತದೆ. ಶಿಕ್ಷಣವೆಂಬುದು ಕೇವಲ ನಾಲ್ಕು ಗೋಡೆಗಳ ನಡುವೆ ಕಲಿಯುವ ಪಾಠವಲ್ಲ. ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಸವಾಲುಗಳನ್ನು ಎದುರಿಸುವ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಶಕ್ತಿಯಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಬಡತನದ ಕಾರಣದಿಂದ ಯಾವುದೇ ಮಗು ವಿದ್ಯೆಯಿಂದ ವಂಚಿತವಾಗಬಾರದು. ಈ ಮಹತ್ತರ ಉದ್ದೇಶದಿಂದ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ಕೈಗೊಳ್ಳುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಇಂತಹ ಕಾರ್ಯಗಳಿಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಸವದಿ,  ಶಿಕ್ಷಣ ಇಲಾಖೆಯ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ಡಿಡಿಪಿಐ ಅಜೀತ ಮನ್ನಿಕೇರಿ, ತಹಶೀಲ್ದಾರ್ ಸಿದರಾಯ ಭೋಸಗಿ, ತಾ. ಪಂ. ಅಧಿಕಾರಿ ಶಿವಾನಂದ ಕಲ್ಲಾಪೂರ, ಬಿಇಒ ಎಂ.ಆರ್. ಮುಂಜಿ, ಡಿವೈಎಸ್ಪಿ ವೀರೇಂದ್ರ ಪಿ. ಯುವ ಮುಖಂಡ ಚಿದಾನಂದ ಸವದಿ, ಶಿವಕುಮಾರ ಸವದಿ, ಸಂತೋಷ ಸಾವಡಕರ, ನ್ಯಾಯವಾದಿ ಸಿದ್ದಾರೂಢ ಸವದಿ  ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ನಾಗನೂರು ಗ್ರಾಮಸ್ಥರು ಉಪಸ್ಥಿತರಿದ್ದರು.