ಹೊತ್ತಿ ಉರಿದ ಕಾಂಗ್ರೆಸ್ ಮುಖಂಡನ ಕಾರು ; ಅನುಮಾನ ಮೂಡಿಸಿದ ಸಾವು
ಚಿಕ್ಕೋಡಿ : ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಕಾರು ಹೊತ್ತಿ ಉರಿದ ಪರಿಣಾಮ ವ್ಯಕ್ತಿ ಸುಟ್ಟು ಕರಕಲಾದ ಘಟನೆ
ತಾಲೂಕಿನ ಜೈನಾಪುರ ಗ್ರಾಮದ ಬಳಿ ನಡೆದಿದೆ.
ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟ್ ನಿವಾಸಿ ಪೈರೋಜ್ ಬಡಗಾಂವ ( 40 ) ಮೃತಪಟ್ಟ ವ್ಯಕ್ತಿ. ಜೈನಾಪುರ ಗ್ರಾಮದ
ಸಂಕೇಶ್ವರ – ಜೇವರ್ಗಿ ರಾಜ್ಯ ಹೆದ್ದಾರಿ ಬಳಿ ಮಂಗಳವಾರ ತಡರಾತ್ರಿ ಕಾರಿಗೆ ಬೆಂಕಿ ಬಿದ್ದಿದೆ. ಬುಧವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು ಘಟನೆಯಲ್ಲಿ ಗ್ರಾನೈಟ್ ಉದ್ಯಮಿ ಪೈರೋಜ್ ಸಂಪೂರ್ಣ ಸುಟ್ಟು ಕರಕಲಾಗಿದ್ದಾನೆ.
ಮೃತ ವ್ಯಕ್ತಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಜೊತೆಗೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ತಯಾರಿ ನಡೆಸಿದ್ದರು ಎಂದು ತಿಳಿದುಬಂದಿದೆ. ಉದ್ಯಮಿ ಸಾವಿಗೆ ಕುಟುಂಬಸ್ಥರು ಅನುಮಾನ ಹೊರಹಾಕಿದ್ದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.