ಪತ್ರಕರ್ತ ಗುರುಲಿಂಗಸ್ವಾಮಿ ನಿಧನದ ಹಿನ್ನಲೆ : ಬೆಳಗಾವಿ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ
ಬೆಳಗಾವಿ : ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಹಾಗೂ ಹಿರಿಯ ಪತ್ರಕರ್ತರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಅವರು ಈಚೇಗೆ ಅಕಾಲಿಕ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ವಾರ್ತಾ ಭವನದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ಪತ್ರಕರ್ತರಾಗಿ ಉತ್ತಮ ಹೆಸರು ಮಾಡುವುದರ ಜತೆಗೆ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಇವರು ಎಲ್ಲರನ್ನೂ ಗೌರವದಿಂದ ಕಾಣುವ ಗುಣಹೊಂದಿದ್ದರು. ಉತ್ತರ ಕರ್ನಾಟಕ ಭಾಗದ ಪತ್ರಕರ್ತರು ಬೆಂಗಳೂರಿಗೆ ಹೋಗಿದ್ದ ಸಮಯದಲ್ಲಿ ಇವರನ್ನು ಸಂಪರ್ಕಿಸಿದರೆ ತಮ್ಮಿಂದಾಗುವ ಸಹಾಯ, ಸಹಕಾರವನ್ನು ಮಾಡುತ್ತಿದ್ದರು ಎಂದರು.
ಅತ್ಯಂತ ಕಡಿಮೆ ಅವಧಿಯಲ್ಲಿಯೇ ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಿದ್ದರಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿ ನೇಮಕ ಹೊಂದಿದ್ದರು ಎಂದರಲ್ಲದೇ, ತಮ್ಮೊಂದಿಗಿನ ಒಡನಾಟವನ್ನು ಮೇಲುಕು ಹಾಕಿದರು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ವಿಜಾಪುರ ಮಾತನಾಡಿ, ದಿ. ಗುರುಲಿಂಗಸ್ವಾಮಿ ಹೊಳಿಮಠ ಅವರು ಎಲ್ಲರಿಗೂ ಚಿರಪರಿತ ವ್ಯಕ್ತಿ. ಇವರ ಅಕಾಲಿನ ನಿಧನ ಪತ್ರಿಕಾ ರಂಗ ಅಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಗೆ ತುಂಬಲಾರ ನಷ್ಟವಾಗಿದೆ ಎಂದರು.
ಇದಕ್ಕೂ ಮೊದಲು ದಿ. ಗುರುಲಿಂಗಸ್ವಾಮಿ ಹೊಳಿಮಠ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷಗಳ ಕಾಲ ಮೌನ ಆಚರಿಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಕೇಶವ ಆದಿ, ಮಂಜುನಾಥ ಕೋಳಿಗುಡ್ಡ, ಮಂಜುನಾಥ ಪ್ಯಾಟಿ, ವೆಂಕಟೇಶ ಪಾಗಾದ, ರಾಜಶೇಖರಯ್ಯ ಹಿರೇಮಠ, ಸುನೀಲ ಪಾಟೀಲ, ಸುರೇಶ ನೇರ್ಲಿ, ಜಗದೀಶ ವಿರಕ್ತಮಠ, ಪ್ರಶಾಂತ ಮಾಲಗಾಂವಿ, ವಿಶ್ವನಾಥ ದೇಸಾಯಿ, ಹೊಂಗಲ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು