ಬೈಲಹೊಂಗಲ : ವಿಶ್ವ ರೈತ ಸಮಾವೇಶದಲ್ಲಿ ಭಾಗವಹಿಸಲು ಮೈಸೂರಿಗೆ ತೆರಳುತ್ತಿದ್ದ ಟಾಟಾ ಎಸ್‌ ವಾಹನೊಂದು ಪಲ್ಟಿಯಾದ ಪರಿಣಾಮ ಸುಮಾರು 30ಕ್ಕೂ ಹೆಚ್ಚು ರೈತರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಭಾನುವಾರ ತಾಲೂಕಿನ ಜಾಲಿಕೊಪ್ಪ ಸಮೀಪ ನಡೆದಿದೆ.

ಗಾಯಗೊಂಡವರು ತಾಲೂಕಿನ ಗರಜೂರ ಗ್ರಾಮದ ರೈತರು ಎಂದು ತಿಳಿದುಬಂದಿದೆ. ಇವರು ಗರಜೂರ ಗ್ರಾಮದಿಂದ ಬೈಲಹೊಂಗಲ ಮಾರ್ಗವಾಗಿ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೈಸೂರಿನಲ್ಲಿ ನಡೆಯುವ ವಿಶ್ವ ರೈತ ಸಮಾವೇಶದಲ್ಲಿ ಭಾಗವಹಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.

ಜಾಲಿಕೊಪ್ಪ ಹತ್ತಿರ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ವಾಹನದಲ್ಲಿದ್ದ ಪುರುಷ ರು, ಮಹಿಳೆಯರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಾಹನದಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಕರೆದೊಯ್ದರು.

ಗಾಯಾಳುಗಳನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ, ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಗುರುರಾಜ ಕಲಬುರ್ಗಿ ಹಾಗೂ ಎಫ್‌ವೈ ಮಲ್ಲೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.