
ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಗೋಕಾಕ್ : ಕೊವಿಡ್ ಹಿನ್ನಲೆಯಲ್ಲಿ ಬಹು ದಿನಗಳ ನಂತರ ಶಾಲಾ ಕಾಲೇಜುಗಳು ಆರಂಭವಾಗಿದ್ದರು ಶಾಲೆಗೆ ತೆರಳಲು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಪಿ ಜಿ ಹುಣಶಾಳ ಗ್ರಾಮದ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಪಿಜಿ ಹುಣಶಾಳ ಗ್ರಾಮದ ಸಾರಿಗೆ ಸಂಸ್ಥೆ ಬಸ್ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋವಿಡ್ ಮಾರ್ಗಸೂಚಿ ತೆರವಾದ ನಂತರ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪವಾಗಿದ್ದು, ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆ ಆರಂಭಗೊಂಡಿಲ್ಲ.
ಇದರಿಂದ ವಿದ್ಯಾರ್ಥಿಗಳು ಬಸ್‌ಗಳಿಗಾಗಿ ರಸ್ತೆ ಬದಿಯಲ್ಲಿ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ಮೂಡಲಗಿ ತಾಲೂಕಿನ ಪಿಜಿ ಹುಣಶಾಳ ಸೇರಿದಂತೆ
ಪಕ್ಕದ ಹಳ್ಳಿಯ ವಿದ್ಯಾರ್ಥಿಗಳು ತಾಲೂಕು ಕೇಂದ್ರಕ್ಕೆ ಬರಬೇಕಾದರೆ ದೂರದವರೆಗೆ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಭಟನೆಯಲ್ಲಿ ತೊಡಗಿದ್ದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ವರದಿ – ಸತೀಶ್ ಕುಂಬಾರ
ಗೋಕಾಕ್