ಸಾಲಗಾರರ ಕಾಟಕ್ಕೆ ಬೇಸತ್ತು ಗೋಕಾಕ್ ರೈತ ಆತ್ಮಹತ್ಯೆಗೆ ಯತ್ನ ವೀಡಿಯೋ ವೈರಲ್
ಗೋಕಾಕ್ : ಸಾಲಗಾರ ಕೊಡುತ್ತಿದ್ದ ಕಿರುಕುಳಕ್ಕೆ ಬೇಸತ್ತು, ಫೇಸ್ಬುಕ್ ಲೈವ್ ನಲ್ಲಿಯೇ ರೈತನೋರ್ವ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಗೋಕಾಕ್ ತಾಲ್ಲೂಕಿನ ಮಕ್ಕಳಗೇರಿ ಗ್ರಾಮದ ಲಕ್ಷ್ಮಣ ಇಳಗೇರ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ರೈತ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಈತನನ್ನು ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರೈತ ಮಾಡಿರುವ ಫೇಸ್ಬುಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೋಗಾಗಿ ಕೆಳಗಿನ ಲಿಂಕ್ ಒತ್ತಿ
https://www.facebook.com/108396434841799/posts/122702283411214/
ಸಂತ್ರಸ್ತ ರೈತ ವಿಷ ಸೇವನೆ ಮಾಡುವ ಮುಂಚೆ ತನ್ನ ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದು, ಮೂವರು ಆರೋಪಿಗಳ ಹೆಸರುಗಳನ್ನು ಹೇಳಿದ್ದಾನೆ. ಆರೋಪಿಗಳು ತನ್ನ ಟ್ರ್ಯಾಕ್ಟರ್ ಕಸಿದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆಂದು ಆತ ಆರೋಪಿಸಿದ್ದಾನೆ.
ಸಂತ್ರಸ್ತ ರೈತ ವಿಡಿಯೋದಲ್ಲಿ ಹೇಳಿರುವ ಪ್ರಕಾರ, ವ್ಯವಹಾರಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಅರುಣ ಪವಾರ, ಅಶೋಕ ಅಂಕಲಗಿ ಮತ್ತು ಯಲ್ಲಪ್ಪ ಗಸ್ತಿ ಈ ಮೂವರು ಆತನಿಗೆ ಕಿರುಕುಳ ನೀಡಿದ್ದಾರೆ. ಮನೆ ಮುಂದಿನ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಒಮ್ಮೆ ರೂ.25 ಸಾವಿರ, ಇನ್ನೊಮ್ಮೆ ರೂ.1 ಲಕ್ಷ ಕಟ್ಟಿದರೂ ಮೂರು ತಿಂಗಳು ಕಳೆದರೂ ಟ್ರ್ಯಾಕ್ಟರ್ ಬಿಟ್ಟು ಕೊಟ್ಟಿಲ್ಲ. ಇನ್ನೂ ರೂ. 3.5 ಲಕ್ಷ ಪಾವತಿಸದಿದ್ದರೆ ನಿನ್ನ ಹೊಲ, ಮನೆ ಮಾರಿಸ್ತೀವಿ. ಹೆಂಡತಿ ಮಕ್ಕಳನ್ನ ಬಿಡೋದಿಲ್ಲ ಎಂದು ಧಮ್ಕಿ ಹಾಕಿದ್ದಾರೆ.
ಮಾನಸಿಕ ಹಿಂಸೆ ತಾಳಲಾಗದೇ ವಿಷ ಸೇವನೆ ಮಾಡುತ್ತಿದ್ದೇನೆ ಎಂದು ಹೇಳಿ ಕೀಟನಾಶಕ ಕುಡಿದಿದ್ದಾನೆ. ವಿಡಿಯೋ ಗಮನಿಸಿದ ಕುಟುಂಬಸ್ಥರಿಂದ ಕೂಡಲೇ ಆತನನ್ನು ಗೋಕಾಕ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.