ಅಭಿವೃದ್ಧಿ, ಹಿಂದುತ್ವದ ಮೇಲೆ ಪಾಲಿಕೆ ಚುನಾವಣೆ ಎದುರಿಸುತ್ತೇವೆ : ಮಾಜಿ ಡಿಸಿಎಂ ಸವದಿ
ಬೆಳಗಾವಿ : ಅಭಿವೃದ್ಧಿ, ಹಿಂದುತ್ವದ ಮೇಲೆ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಎದುರಿಸುತ್ತೇವೆ. ಎಂ ಪ್ಲಸ್ ಎಂ ಬಗ್ಗೆ ಮತದಾರರಲ್ಲಿ ಮನವರಿಕೆ ಮಾಡಿ ಕೊಡಲಾಗುವುದು ಇದು, ಮಾರಾ ಮಾರಿ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುವ ಮುನ್ನ ಮಾತನಾಡಿದರು. ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಭಾಷೆಯ ಆಧಾರದ ಮೇಲೆ ನಡೆಯುತ್ತಿತ್ತು. ನಮ್ಮ ಪಕ್ಷ ತೀರ್ಮಾನ ಮಾಡಿ ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡಲು ಈ ಚುನಾವಣೆಯಲ್ಲಿ ಗೆಲವು ಸಾಧಿಸುತ್ತೇವೆ ಎನ್ನುವ ಪ್ರಯೋಗ ಮಾಡಿದ್ದೇವೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎನ್ನುವ ವಿಶ್ವಾವ ಇದೆ ಎಂದರು.
ಎಂ ಪ್ಲಸ್ ಎಂ ಬಗ್ಗೆ ಪ್ರತಿಯೊಬ್ಬ ಮತದಾರರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಎಂ ಪ್ಲಸ್ ಎಂ ಅಂದರೆ ಮಾರಾ ಮಾರಿ ಎಂದು ಲೇವಡಿ ಮಾಡಿದ ಅವರು, ನಮಗೆ ಸಾವಿರಾರು ವರ್ಷದ ಹೋರಾಟ ಇದೆ. ಬೆಳಗಾವಿ ಜನ ಸ್ವಾಭಿಮಾನದ ಪರವಾಗಿರುತ್ತಾರೋ ಅಥವಾ ಸ್ವಾಭಿಮಾನ ಬಿಟ್ಟು ಮತ ಹಾಕುತ್ತಾರೋ ಎಂದು ನಾಡಿನ ಜನ ಪಾಲಿಕೆಯ ಚುನಾವಣೆಯನ್ನು ನೋಡುತ್ತಿದ್ದಾರೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸುವ ಕೆಲಸವನ್ನು ಎಲ್ಲ ನಾಯಕರು ಮಾಡುತ್ತೇವೆ. ಬರುವ ಎರಡು ದಿನಲ್ಲಿ ಚುನಾವಣೆಯ ತಂತ್ರವನ್ನು ರೂಪಿಸಲಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದು, ಮಧ್ಯದ ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿಯದ್ದೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ ಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಕೋವಿಡ್ ನಿರ್ವಹಣೆ, ಪ್ರತಿಯೊಂದು ಕ್ಷೇತ್ರಕ್ಕೆ ಕೊಡುಗೆ, ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯೋಜನೆಯಂಥ ಮಹತ್ವದ ಕೊಡುಗೆಯನ್ನು ನಮ್ಮ ಸರಕಾರ ನೀಡಿದೆ. ಇನ್ನೂ ಕೆಲ ಮಹಾನಗರದಲ್ಲಿ ಅಭಿವೃದ್ಧಿಯಾಗಿಲ್ಲ. ಪಾಲಿಕೆಯ ಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿ ಅಧಿಕಾರ ಹಿಡಿದರೆ ಸಾಕಷ್ಟು ಅಭಿಯ ಪಡಿಸಲಾಗುವುದು ಎಂದರು.
ಶಾಸಕ ಅನಿಲ್ ಬೆನಕೆ ಮಾತನಾಡಿ, ಕಳೆದ 26 ವರ್ಷಗಳ ಬಳಿಕ ಕಾರ್ಯಕರ್ತರ ಇಚ್ಚಾಶಕ್ತಿಯ ಫಲವಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಹಳಷ್ಟು ಕಡೆಗಳಲ್ಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ ಎಂದರು. ಆದರೆ ಅವರು ಬಿಜೆಪಿ ಕಾರ್ಯಕರ್ತರು ಪಕ್ಷದ ವರಿಷ್ಠರ ಮಾತಿಗೆ ಗೌರವ ಕೊಟ್ಟು ನಾಮಪತ್ರ ಹಿಂಪಡೆದಿದ್ದಾರೆ ಎಂದರು.
ಇದು ಕಾರ್ಯಕರ್ತರ ಚುನಾವಣೆ ಇರುವುದರಿಂದ ಎಲ್ಲ ಕಾರ್ಯಕರ್ತರು ಗೆಲವು ಸಾಧಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರಕಾರದ ಕೊಡುಗೆ ಮುಂದಿಟ್ಟುಕೊಂಡು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಚುನಾವಣೆ ಉಸ್ತುವಾರಿ ಸತೀಶ ರೆಡ್ಡಿ ಮಾತನಾಡಿ, ಬೆಳಗಾವಿ ನಗರದ ಜನ ಈ ಬಾರಿ ಅಭಿವೃದ್ಧಿ ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಸಾರಿ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 58 ವಾಡ್೯ಗಳ ಪೈಕಿ 45ಕ್ಕೂ ಅಧಿಕ ಸ್ಥಾನ ಪಡೆದು ಅಧಿಕಾರ ಹಿಡಿದು ಮಹಾನಗರದ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುತ್ತೇವೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾದರೆ ಅಭಿವೃದ್ಧಿ ಹೊಳೆ ಹಾಗೂ ಸರಕಾರದಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುಧಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿ ಅಭಯ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಚುನಾವಣೆ ಉಸ್ತುವಾರಿ ಸತೀಶ ರೆಡ್ಡಿ, ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಮಹೇಶ ಕುಮಠಳ್ಳಿ, ಅನಿಲ್ ಬೆನಕೆ, ಕಾಡಾ ಅಧ್ಯಕ್ಷ ಡಾ.ವಿ.ಐ.ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಬಿಜೆಪಿ ಮುಖಂಡರಾದ ಶಶಿಕಾಂತ ಪಾಟೀಲ, ಸಂಜಯ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.