ಕಾಂಗ್ರೆಸ್ ಕೈಗೆ ಒಂದು ಬಾರಿ ಪಾಲಿಕೆ ಕೊಟ್ಟು ನೋಡಿ : ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ : ಬೇರೆಯವರು ಯಾವುದೇ ರೀತಿಯ ರಾಜಕಾರಣ ಮಾಡಲಿ ಆದರೆ ನಾವು ಮಾತ್ರ ಅಭಿವೃದ್ಧಿಗೆ ಪೂರಕವಾಗುವ ರಾಜಕಾರಣ ಮಾಡುತ್ತೇವೆ. ಒಂದು ಬಾರಿ ಪಾಲಿಕೆಯನ್ನು ಕಾಂಗ್ರೆಸ್ ಕೈಗೆ ಕೊಟ್ಟು ನೋಡಿ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ. ಬೆಲೆ ಏರಿಕೆ, ಸ್ಮಾರ್ಟ್ ಸಿಟಿ ಕೆಲಸ, ಮಹಾನಗರ ಪಾಲಿಕೆ ಆಡಳಿತ ಎಲ್ಲವನ್ನೂ ಜನರು ನೋಡುತ್ತಿದ್ದಾರೆ. ಎಂಇಎಸ್, ಬಿಜೆಪಿ ಮೇಯರ್ ಆಯ್ತು. ನಮ್ಮ ಕೈಗೆ ಒಮ್ಮೆ ಪಾಲಿಕೆ ಕೊಟ್ಟು ನೋಡಿ, ನಾವು ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಅವರು ಹೇಳಿದರು.
ಕಣದಲ್ಲಿರುವ ಕಟ್ಟಕಡೆಯ ಎದುರಾಳಿಯೂ ನಮ್ಮ ಪ್ರತಿಸ್ಪರ್ಧಿಯೇ. ಯಾರನ್ನೂ ನಾವು ಹಗುರವಾಗಿ ಪರಿಗಣಿಸುವುದಿಲ್ಲ. ಆದರೆ ಬೇರೆಯವರಂತೆ ನಾವು ಜಾತಿ, ಭಾಷೆಯ ರಾಜಕಾರಣ ಮಾಡುವುದಿಲ್ಲ ಎಂದರು. ಇಷ್ಟು ದಿನ ಇವರೆಲ್ಲ ಏನು ಮಾಡಿದ್ದಾರೆ ಎಂದು ನೋಡಿಯಾಗಿದೆ. ಈಗ ಮೊದಲ ಬಾರಿಗೆ ಚಿಹ್ನೆಯ ಆಧಾರದ ಮೇಲೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಕೈಗೆ ಪಾಲಿಕೆ ಕೊಟ್ಟು ನೋಡಿ. ಯಾರು ಏನೇ ರಾಜಕಾರಣ ಮಾಡಲಿ, ಕಾಂಗ್ರೆಸ್ ಮಾತ್ರ ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ. ನಿಜವಾದ ಅಭಿವೃದ್ಧಿ ಎಂದರೆ ಏನೆಂದು ತೋರಿಸುತ್ತೇವೆ ಎಂದು ಹೆಬ್ಬಾಳಕರ್ ಹೇಳಿದರು.