Select Page

ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ – ಡಿಸಿ ಖಡಕ್ ಸೂಚನೆ ಏನು?

ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ – ಡಿಸಿ ಖಡಕ್ ಸೂಚನೆ ಏನು?

ಬೆಳಗಾವಿ : ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲ ಪೋಸ್ಟರ್, ಬ್ಯಾನರ್, ಗೋಡೆಬರಹಗಳನ್ನು ತೆರವುಗೊಳಿಸಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲ ತಂಡಗಳು ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.

ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣಾಧಿಕಾರಿಗಳ ಹಾಗೂ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯವನ್ನು ‌ಒದಗಿಸಬೇಕು. ಸಂಬಂಧಿಸಿದ ಮತಗಟ್ಟೆಗಳ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳು ಕಡ್ಡಾಯವಾಗಿ ಮತಗಟ್ಟೆಗಳಿಗೆ ಭೇಟಿ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಾದರಿ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ವರದಿಯಾದಲ್ಲಿ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸಂಬಂಧಿಸಿದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಲು ಸೂಚನೆ:

ನಗದು, ಮದ್ಯ, ಉಡುಗೊರೆ ಮತ್ತಿತರ ವಸ್ತುಗಳ ಅಕ್ರಮ ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಬೇಕು. ಈ ರೀತಿಯ ಅಕ್ರಮ ಸಾಗಾಣಿಕೆ ವೇಳೆ ವಶಪಡಿಸಿಕೊಂಡ ವಸ್ತುಗಳ ಮೇಲೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಭಾವಚಿತ್ರಗಳಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು.

ಭಾವಚಿತ್ರವಿರುವ ಅಥವಾ ಪಕ್ಷದ ಚಿಹ್ನೆ ಕಂಡುಬಂದಾಗ ಸಂಬಂಧಿಸಿದವರನ್ನೇ ಮೊದಲ ಆರೋಪಿಯನ್ನಾಗಿಸಬೇಕು. ವಾಹನ ಚಾಲಕರು ಮತ್ತಿತರ ವ್ಯಕ್ತಿಗಳನ್ನು ಎರಡು, ಮೂರನೇ ಆರೋಪಿಗಳನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.‌ಬಚುನಾವಣಾ ಪ್ರಚಾರ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಪರವಾನಿಗೆಯನ್ನು ನೀಡಲು ಅನುಕೂಲವಾಗುವಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಆರಂಭಿಸಬೇಕು.

ನೀತಿಸಂಹಿತೆ ಜಾರಿಗೆ ಬಂದಿರುವುದರಿಂದ ಮೊದಲ 24 ಗಂಟೆ ಅತ್ಯಂತ ಪ್ರಮುಖವಾಗಿದೆ. ಸಂಬಂಧಿಸಿದ  ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ತಕ್ಷಣವೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಅಗತ್ಯ ಮಾಹಿತಿಯನ್ನು ನೀಡಬೇಕು.

Advertisement

Leave a reply

Your email address will not be published. Required fields are marked *

error: Content is protected !!