ಸಿದ್ದರಾಮಯ್ಯ ಕುರ್ಚಿಗೆ ಕಂಟಕವಾದರೆ ರೆಬೆಲ್ ಆಗ್ತಾರಾ ಸಾಹುಕಾರ್ ಸತೀಶ್…?
ಬೆಂಗಳೂರು : ಈಗಾಗಲೇ ಲೋಕಸಭಾ ಚುನಾವಣೆ ಮುಕ್ತಾಯವಾಗಿ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಆಗಿದೆ ಆದರೆ ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಮಾತ್ರ ಜೋರಾಗಿ ಕೇಳಿಬರುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಡಿಕೆಶಿ ಬರುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಇನ್ನೊಂದು ವರ್ಷದಲ್ಲಿ ಡಿಕೆಶಿ ಸಿಎಂ ಹುದ್ದೆ ಅಲಂಕರಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ ಆದರೂ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಕೆಲ ಬದಲಾವಣೆಗಳು ಉಲ್ಟಾ ಹೊಡೆಯುತ್ತಿವೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದ ಸಚಿವರು ಸಿಎಂ ಬದಲಾವಣೆ ವಿಚಾರವಾಗಿ ನಾನಾ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಒಂದುವೇಳೆ ಸಿಎಂ ಬದಲಾವಣೆ ಸಂದರ್ಭ ಬಂದರೆ ಸರ್ಕಾರದ ವಿರುದ್ಧವೇ ಬಂಡಾಯ ಏಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಹಾಲಿ ಸಚಿವ ಹಾಗೂ ಬೆಳಗಾವಿ ಜಾರಕಿಹೊಳಿ ಸಹೋದರರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಸರ್ಕಾರದ ಆಪ್ತ ವಲಯದ ಸಚಿವರು. ಸಿಎಂ ಬದಲಾವಣೆ ವಿಚಾರವಾಗಿ ಸತೀಶ್ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡರೆ ಇದರ ವ್ಯತಿರಿಕ್ತ ಪರಿಣಾಮ ಸರ್ಕಾರದ ಮೇಲೆ ಬೀಳುತ್ತದೆ.
ಮೂಲಗಳ ಪ್ರಕಾರ ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಮುಂಬರುವ ರಾಜಕೀಯ ವಿದ್ಯಮಾನಗಳ ಪೂರಕ ಎಂಬಂತೆ ಈ ನಡೆ ಚರ್ಚೆಯಾಗುತ್ತಿದೆ.
ಒಂದು ವೇಳೆ ತಮ್ಮ ಆಪ್ತ ಸಿಎಂ ಅವರನ್ನು ಕುರ್ಚಿಯಿಂದ ಕೆಳಗೆ ಇಳಿಸುವ ಪ್ರಯತ್ನ ಕಾಂಗ್ರೆಸ್ ಹೈಕಮಾಂಡ್ ಮಾಡಿದರೆ ಇದರಿಂದ ಸಚಿವ ಸತೀಶ್ ಜಾರಕಿಹೊಳಿ ವೈಲೆಂಟ್ ಆದರೂ ಅಚ್ಚರಿ ಇಲ್ಲ. ಜೊತೆಗೆ ಮಹಾರಾಷ್ಟ್ರದ ಏಕನಾಥ ಸಿಂಧೆ ನೇತೃತ್ವದಲ್ಲಿ ನಡೆದ ಆಪರೇಷನ್ ಕರ್ನಾಟಕದಲ್ಲಿ ನಡೆಯಬಹುದು ಎನ್ನುತ್ತಾರೆ ಹಲವರು.
ಒಟ್ಟಿನಲ್ಲಿ ಬಂಡಾಯದ ಬಾವುಟ ಹಾರಿಸುವಲ್ಲಿ ಬೆಳಗಾವಿ ನೆಲ ಯಾವತ್ತೂ ಮುಂದೂ. ಆದರೆ ಈ ಬಾರಿ ಅಪ್ಪಟ ಕಾಂಗ್ರೆಸ್ ಪಕ್ಷದ ಕಟ್ಟಾಳು ಬಂಡಾಯ ಬಾವುಟ ಹಾರಿಸಿದರೆ ಇದರಿಂದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದರು ಅಚ್ಚರಿ ಪಡಬೇಕಿಲ್ಲ.