ಗ್ರಾಮ ಪಂಚಾಯತಿ ನೌಕರರ ಬೃಹತ್ ಪ್ರತಿಭಟನೆ : ಹಲವು ಬೇಡಿಕೆ ಈಡೇರಿಸಲು ಆಗ್ರಹ
ಬೆಳಗಾವಿ : ರಾಜ್ಯ ಗ್ರಾಪಂ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘ ಸೋಮವಾರ ಸುವರ್ಣ ವಿಧಾನಸೌಧದ ಎದುರಿನ ಕೊಂಡುಸಕೊಪ್ಪ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಒತ್ತಾಯಿಸಿದರು.
ಗ್ರಾಪಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲಕ್೯, ಬಿಲ್ ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳನ್ನು ಸಿ ದರ್ಜೆಯ ಮೇಲ್ದರ್ಜೆಗೆ ಏರಿಸಬೇಕು ಮತ್ತು ಅಟೆಂಡರ್, ಕ್ಲೀನರ್ಸ್, ವಾಟರ್ ಮ್ಯಾನ್ ಮೊದಲಾದ ಹುದ್ದೆಯನ್ನು ಡಿ ದರ್ಜೆಯ ಮೇಲ್ದರ್ಜೆಗೇರಿಸುವ ಮೂಲಕ ನಗರ ಮತ್ತು ಪಪಂ ನಲ್ಲಿರುವಂತೆ ಪಂಚಾಯತ್ ನೌಕರರಿಗೂ ಕನಿಷ್ಠ ವೇತನದ ಬದಲು ವೇತನ ಶ್ರೇಣಿ ನಿಗದಿ ಪಡಿಸಬೇಕು. ಜತೆಗೆ ನೌಕರರು ಮತ್ತು ನೌಕರರ ಅವಲಂಬಿತರಿಗೆ ಸರಕಾರದಿಂದಲೇ ಸೂಕ್ತ ಆರೋಗ್ಯ ಭದ್ರತೆಯೊಂದಿಗೆ ಪಂಚಾಯತ್ ನೌಕರರ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ಕಚೇರಿಯಲ್ಲಿ ಕಾರ್ತಯ ನಿರ್ವಹಿಸುತ್ತಿರುವ ಎಲ್ಲಾ ವಾಟರ್ ಮ್ಯಾನ್, ಶುಚಿತ್ವ ನೌಕರ, ಅಟೆಂಡರ್, ಬಿಲ್ ಕಲೇಕ್ಟರ್ ಮತ್ತು ಡಾಟಾ ಎಂಟ್ರಿ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸದೇ ಹಾಗೂ ಪಂಚಾಯತಿಗಳಲ್ಲಿ ಹುದ್ದೆಗಳ ಗರಿಷ್ಠ ಮಿತಿ ಹಾಗೂ ಕಾಲ ಮಿತಿಯನ್ನು ನಿಗದಿ ಪಡಿಸಿದೆ. ರಾಜ್ಯದಲ್ಲಿರುವ ಎಲ್ಲಾ ನೌಕರರಿಗೂ ಒಂದು ಬಾರಿ ಜಿಪಂ ನಿಂದ ಕಡ್ಡಾಯವಾಗಿ ಅನುಮೋದನೆ ನೀಡಬೇಕು. ಗ್ರಾಪಂ ಡಾಟಾ ಎಂಟ್ರಿ ಅಪರೇಟ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳದೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ಕಡ್ಡಾಯವಾಗಿ ಜಿಪಂ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು.
ಜಿಪಂ ಅನುಮೋದನೆಯಾಗಲಿ ಅಥವಾ ಆಗದೆ ಇರಲಿ ಜಿಪಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗ್ರಾಪಂ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು. ಸದರಿ ನಿವೃತ್ತಿ ಉಪಧನ ಪಾವತಿಸಲು ಜಿಪಂ ಮಟ್ಟದಲ್ಲಿ ಸರಕಾರವೇ ಶಾಶ್ವತ ನಿಧಿಯನ್ನು ಕಾಯ್ದಿರಿಸುವ ಮೂಲಕ ನಿವೃತ್ತಿಯಾಗುವ ಎಲ್ಲಾ ನೌಕರರಿಗೂ ಒಂದು ತಿಂಗಳವರೆಗೆ ಗೌರವಯುತವಾಗಿ ಸಂದಾಯವಾಗಬೇಕಾದ ನಿವೃತ್ತಿ ಉಪಧನವನ್ನು ಪಾವತಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಡಾ. ದೇವಿಪ್ರಸಾದ ಬೊಲ್ಮ, ಪದ್ಮನಾಬ್ ಕುಲಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.