
ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ನಗರಸೇವಕರ ಸದಸ್ಯತ್ವ ರದ್ದು

ಬೆಳಗಾವಿ : ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿರುವ ಬೆಳಗಾವಿಯ ತಿನಿಸುಕಟ್ಟೆ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ಮಳಿಗೆಯನ್ನು ಬಳಸಿಕೊಂಡ ಆರೋಪದ ಮೇಲೆ ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ವಾರ್ಡ್ ನಂ 23 ರ ಸದಸ್ಯ ಜಯಂತ ಜಾಧವ್ ಹಾಗೂ ವಾರ್ಡ್ ಸಂಖ್ಯೆ 41 ರ ಸದಸ್ಯ ಮಂಗೇಶ್ ಪವಾರ್ ಅವರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ನೀಡಿದ್ದ ದೂರಿನ ಅನ್ವಯ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ 1976 ರ ಸೆಕ್ಸನ್( 26 ) ಸ್ಪಷ್ಟ ಉಲ್ಲಂಘನೆ ಕಂಡುಬಂದ ಹಿನ್ನಲೆಯಲ್ಲಿ ಇಬ್ಬರ ಸದಸ್ಯತ್ವ ರದ್ದಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ತಿನಿಸು ಕಟ್ಟೆ ಮಾರಾಟ ಮಳಿಗೆಯ ಹರಾಜು ಪ್ರಕ್ರಿಯೆಯಲ್ಲಿ ನಗರಸಭೆಯ ಇಬ್ಬರು ಬಿಜೆಪಿ ಸದಸ್ಯರು ತಮ್ಮ ಪ್ರಭಾವ ಬಳಿಸಿ ಸೋನಾಲಿ ಜಾಧವ್ ಹಾಗೂ
ನೀತಾ ಪವಾರ್ ಪಡೆದುಕೊಂಡಿದ್ದಾರೆ. ಇಬ್ಬರು ಬಿಜೆಪಿ ಸದಸ್ಯರು ನಗರಸೇವಕರಾಗಿ ಆಯ್ಕೆಯಾದ ನಂತರ ಮಳಿಗೆಯನ್ನು ಹಿಂದಿರುಗಿಸದೆ ಅಕ್ರಮ ಎಸಗಿದ್ದು ದೃಢಪಟ್ಟ ಹಿನ್ನಲೆಯಲ್ಲಿ ಇಬ್ಬರ ಸದಸ್ಯತ್ವ ರದ್ದುಗೊಳಿಸಲಾಗಿದೆ.
ಈ ಪ್ರಕರಣ ಕುರಿತು ಹೋರಾಟಗಾರ ಸುಜೀತ್ ಮುಳಗುಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಿನಿಸು ಕಟ್ಟೆ ನಿರ್ಮಾಣ ಬಡ ಹೆಣ್ಣುಮಕ್ಕಳಿಗೆ ಸಹಾಯವಾಗುವ ಉದ್ದೇಶ ಇದ್ದರು ಬಿಜೆಪಿ ಸದಸ್ಯರು ಅನಧಿಕೃತವಾಗಿ ಮಳಿಗೆ ಪಡೆದಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದು ಬೆಳಕಿಗೆ ಬಂದಿದ್ದು ಈ ಹಿನ್ನಲೆಯಲ್ಲಿ ಪ್ರಾದೇಶಿಕ ಆಯುಕ್ತರು ಇಬ್ಬರು ನಗರಸೇವಕರ ಸದಸ್ಯತ್ವ ರದ್ದುಪಡಿಸಿದ್ದು ಸ್ವಾಗತಾರ್ಹ ಎಂದರು.