ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕ ಅರ್ಜುನ ಮಾಳವನವರಿಗೆ ಸನ್ಮಾನ
ಬೆಳಗಾವಿ : ತಾಲೂಕಿನ ಪಂತ ನಗರದ ನಿವಾಸಿ ಅರ್ಜುನ ದು. ಮಾಳವನವರ ಕಳೆದ 33 ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನಲೆ ಸನ್ಮಾನಿಸಿ ಗೌರವಿಸಲಾಯಿತು.
ಶಿವಬಸವನಗರ ಗೆಳೆಯರ ಬಳಗ ಹಾಗೂ ರಾಧಾಕೃಷ್ಣನ್ ಗುರುಬಳಗದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ 33 ವರ್ಷಗಳಿಂದ ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅದೆಷ್ಟೋ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅಪಾರ ಶಿಷ್ಯ ಬಳಗ ಹೊಂದಿರುವ ಅರ್ಜುನ್ ಮಾಳವನವರ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಅಪರೂಪದ ಶಿಕ್ಷಕ –
ತಾವು ಸೇವೆ ಸಲ್ಲಿಸಿದ ಬಹುತೇಕ ಶಾಲೆಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದರು. ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಶಾಲಾ ಬ್ಯಾಗ್, ಪುಸ್ತಕ ಸಾಮಾಗ್ರಿಗಳನ್ನು ವಿತರಿಸುವುದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದ ಇಂಡಾಲನಗರ ಸರ್ಕಾರಿ ಶಾಲೆಯ ಮಕ್ಕಳ ಪಾಲಕರಿಗೆ ಸುಮಾರು ಎರಡು ತಿಂಗಳಿಗೆ ಆಗುವ ಧವಸ ಧಾನ್ಯಗಳನ್ನು ದಾನಿಗಳಿಂದ ಕೊಡುಗೆಯಾಗಿ ನೀಡಿದ್ದರು. ಇವರ 33 ವರ್ಷಗಳ ಸಾರ್ಥಕ ಸೇವೆಯ ಬಗ್ಗೆ ಅನೇಕ ಜನರು ಕೊಂಡಾಡಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ತಾಲೂಕಿನ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಶಿವಬಸವ ನಗರದ ನಿವಾಸಿಗಳು, ಗೆಳೆಯರ ಬಳಗ, ರಾಧಾಕೃಷ್ಣನ್ ಗುರು ಬಳಗದ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.