
ಜಾರಕಿಹೊಳಿ ಕುಟುಂಬದ ವಿರುದ್ಧ ಗುಡುಗಿದ ಯತ್ನಾಳ್ ; ಎಲ್ಲವೂ ಅವರಿಗೆ ಮೀಸಲಿಟ್ಟರೆ ಉಳಿದವರ ಸ್ಥಿತಿ ಏನು..?

ಅಥಣಿ: ಎಲ್ಲ ಕ್ಷೇತ್ರಗಳನ್ನೂ ಜಾರಕಿಹೊಳಿ ಕುಟುಂಬಕ್ಕೆ ಮೀಸಲಿಟ್ಟರೆ ಹಾಲುಮತ, ಲಿಂಗಾಯತ ಸೇರಿದಂತೆ ಇನ್ನೂಳಿದ ಸಮಾಜ ಬಾಂಧವರ ನಾಯಕರು ಏನು ಮಾಡಬೇಕು ಎಂದು ವಿಜಯಪುರ ನಗರ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕ ಬಸನಗೌಡ ಪಾಟೀಲ, ಯತ್ನಾಳ
ಪ್ರಶ್ನಿಸಿದರು.
ಗುರುವಾರ ಸ್ಥಳೀಯ ಭೋಜರಾಜ ಕ್ರೀಡಾಂಗಣದಲ್ಲಿ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಜಾರಕಿಹೊಳಿ ಕುಟುಂಬಕ್ಕೆ ಅಭ್ಯರ್ಥಿ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷದ ಧುರೀಣರಿಗೂ ಕೂಡ ಬೇಸರ ತಂದಿದ್ದು, ಇದರಿಂದ ಬಹುಪಾಲು ಕಾಂಗ್ರೆಸ್ ನಾಯಕರೂ ಕೂಡ ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸುತ್ತಾರೆ ಎಂದ ಅವರು ಪ್ರತಿ ಚುನಾವಣೆಯಲ್ಲಿಯೂ ಸಹ ಜಾತೀಯ ವಿಷ ಬೀಜ ಬಿತ್ತಿ ಲಾಭ ಮಾಡಿಕೊಡುತ್ತಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷದ ಚುನಾವಣೆಯ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಒಂದೇ ಒಂದು ಧರ್ಮದ ಪರವಾದ ಅನೇಕ ಅಂಶಗಳಿವೆ. ಜೊತೆಗೆ ಅಗ್ನಿಪಥ ಯೋಜನೆಯನ್ನು ಕೈ ಬಿಡುತ್ತೇವೆ ಎಂದು ಉಲ್ಲೇಖಿಸಿದ್ದಾರೆ ಎಂದ ಅವರು ಸ್ವಾತಂತ್ರ್ಯ ದ ನಂತರ ನೇಹರು ಮಾಡಿದ ಅನೇಕ ಪ್ರಮಾದಗಳಿಂದಲೇ ದೇಶದಲ್ಲಿ ಅರಾಜಕತೆ ಉಂಟಾಗಲು ಕಾರಣವಾಗಿದೆ ಎಂದರು.
ಪಾಕಿಸ್ತಾನಕ್ಕೆ ಅನಕೂಲವಾಗುವಂತೆ ಜಮ್ಮು ಕಾಶ್ಮೀರಕ್ಕೆ ನೇಹರು 370 ನೇ ವಿಧಿ ಜಾರಿಗೆ ತಂದರು. ಆಗ ಡಾ.ಬಾಬಾಸಾಹೇಬ ಅಂಬೇಡ್ಕರ್ ವಿರೋಧಿಸಿದರೂ ಕೂಡ ನೇಹರು ಈ ವಿಧಿಯನ್ನು ಜಾರಿಗೊಳಿಸಿದರು. ಅಂದಿನಿಂದಲೇ ಇದನ್ನು ವಿರೋಧಿಸಿ ನಮ್ಮ ಹಿರಿಯರಾದ ಪಂ. ಶ್ಯಾಮಪ್ರಸಾದ ಮುಖರ್ಜಿ ಹೋರಾಟ ಮಾಡಿದ್ದರು ಎಂದ ಅವರು ಅಂದಿನಿಂದ ಉಳಿದುಕೊಂಡ ಬಂದ 370 ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದರು ಇಂತಹ ಪ್ರಧಾನಿಯನ್ನು ನಾವು ಪುನರಾಯ್ಕೆ ಮಾಡಿ ಭಾರತವನ್ನು ಮತ್ತು ಸನಾತನ ಧರ್ಮವನ್ನು ಉಳಿಸಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತವಾಗಿದ್ದು, ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಲಿಂಗಾಯತ ಬಂಧುಗಳಿಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸುವೆ ಎಂದ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಣ್ಣಾಸಾಹೇಬ ಜೊಲ್ಲೆ ಇವರಿಗೆ ಮೇ 7 ರಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿ ಪ್ರಧಾನಿ ಮೋದಿಯವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.