ಮಗುವಿಗೆ ಶ್ರೀಕೃಷ್ಣ ವೇಷಭೂಷಣ ತೊಡಿಸಿ ಭಾವೈಕ್ಯತೆ ಸಾರಿದ ಮುಸ್ಲಿಂ ಕುಟುಂಬ
ಬೆಳಗಾವಿಯಲ್ಲಿ ಮುಸ್ಲಿಂ ಕುಟುಂಬದಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ..!
ಬೆಳಗಾವಿ: ನಾಡಿನಾದ್ಯಂತ ಶ್ರೀಕೃಷ್ಣನ ಜನ್ಮಾಷ್ಠಮಿ ಹಿನ್ನೆಲೆ ಬೆಳಗಾವಿ ಸದಾಶಿವ ನಗರದಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಮಾಡದೇ ತಮ್ಮ ಮುದ್ದಿನ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿ ಹಿಂದೂ-ಮುಸ್ಲಿಂ ಬಾಯಿಬಾಯಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಇಲ್ಲಿನ ಸದಾಶಿವ ನಗರದ ದಸ್ತಗೀರ್ ಮೊಕಾಶಿ ಎಂಬುವವರು ತಮ್ಮ ಮುದ್ದಿನ ಮೊಮ್ಮಗ ಅದ್ನಾನ್‌ಗೆ ಕೃಷ್ಣನ ವೇಷಭೂಷಣ ಹಾಕಿ ಶ್ರೀಕೃಷ್ಣನ ಜನ್ಮಾಷ್ಠಮಿ ಆಚರಿಸಿದ್ದಾರೆ. ತಮ್ಮ ಮುದ್ದಿನ ಮಗ ಅದ್ವಾನ್ ಆಸೀಪ್ ಮೊಕಾಶಿಗೆ ಕೃಷ್ಣನ ವೇಷಭೂಷಣ ತೊಡಿಸಿ ಗಮನ ಸೆಳೆದಿದ್ದಾರೆ. ಥೇಟ್ ಶ್ರೀಕೃಷ್ಣನಂತೆ ಪೋಷಾಕು ಹಾಕಿ ಮಗುವಿನ ಕೈಗೆ ಕೊಳಲು ನೀಡಿ ಕೃಷ್ಣನ ಜನ್ಮಾಷ್ಠಮಿ ಆಚರಣೆ ಮಾಡಿದ್ದಾರೆ.ಶ್ರೀಕೃಷ್ಣನ ವೇಷಧರಿಸಿದ ಅದ್ವಾನ್ ಆಸೀಪ್ ಮೊಕಾಶಿ ನಗರದ ಲವ್ ಡೆಲ್ ಶಾಲೆಯಲ್ಲಿ ನಡೆದ ಕೃಷ್ಣನ ಪೋಷಾಕು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಮುಸ್ಲಿಂ ಕುಟುಂಬದ ಸಾಮರಸ್ಯದ ಮನಸ್ಥಿತಿಗೆ ನಾಡಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಹಲವು ಜಾತಿ-ಧರ್ಮದ ಜನಾಂಗ ಹೊಂದಿರುವ ವೈವಿಧ್ಯಮಯ ರಾಷ್ಟ್ರ ಭಾರತವಾಗಿದೆ.ಐಕ್ಯತೆಯಲ್ಲಿ ವಿಶೇಷತೆ ಕಾಣುವ ದೇಶದಲ್ಲಿ ಬೆಳಗಾವಿಯ ಮುಸ್ಲಿಂ ಕುಟುಂಬ ಭಾವೈಕ್ಯ ಸಂದೇಶ ಸಾರಿದೆ. ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುವೆ ಒಡಕ್ಕುಂಟು ಮಾಡಿ ಸಾಮರಸ್ಯವನ್ನ ಹದಗೆಡಿಸುತ್ತಿರುವ ಕೆಲಸಗಳೂ ನಡೆಯುತ್ತಿವೆ.ಜಾತಿ-ಜಾತಿಗಳ ನಡುವಣ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿರುವ ಬೆಳಗಾವಿಯ ಈ ಮುಸ್ಲಿಂ ಕುಟುಂಬ ರಾಮ್ ರಹೀಮ್ ಎಲ್ಲರೂ ಒಂದೇ ಎಂಬ ಸಂದೇಶ ನೀಡಿದೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ದಸ್ತಗೀರ್‌ಸಾಬ್ ಮೊಕಾಶಿ ಅವರು,ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಭಾವೈಕ್ಯತೆಯಿಂದ ಇರುವ ರಾಷ್ಟ್ರವಾಗಿದೆ. ಗೋಕುಲಾಷ್ಠಮಿ ನಿಮಿತ್ತ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ತೊಡಿಸಿದ್ದೇವೆ.ರಾಮನವಮಿ ಸೇರಿದಂತೆ ಎಲ್ಲಾ ಹಬ್ಬಗಳಲ್ಲಿ ನಾವು ಭಾಗಿಯಾಗುತ್ತೇವೆ. ಹಿಂದೂ ಮುಸ್ಲಿಂ ಅಂತಾ ಭೇದಭಾವ ಏನೂ ಇಲ್ಲ. ರಾಮ್ ರಹೀಮ್ ಎಲ್ಲರೂ ಒಂದೇ ಎಂದು ದಸ್ತಗೀರ್‌ಸಾಬ್ ಮೊಕಾಶಿ ತಿಳಿಸಿದ್ದಾರೆ.