
ಮಹಿಳಾ ಸಿಬ್ಬಂದಿ ಜೊತೆ ಎಸಿಪಿ ಅನೈತಿಕ ಸಂಬಂಧ ; ಪತ್ನಿ ಕೊಲೆಗೆ ಸಂಚು ಆರೋಪ….!

ಬೆಂಗಳೂರು : ಮಹಿಳಾ ಡಿವೈಎಸ್ಪಿ ಜತೆ ಸೇರಿ ಪತಿ ಹಲ್ಲೆ ಮಾಡಿದ್ದರೆಂದು ಆರೋಪಿಸಿ ಎಸಿಬಿ ಶ್ರೇಣಿಯ ಪೊಲೀಸ್ ಅಧಿಕಾರಿ ವಿರುದ್ಧ ಪತ್ನಿ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಆಗ್ನೇಯ ವಿಭಾಗದ ಸೆನ್ ಎಸಿಪಿ ಗೋವರ್ಧನ್ ಹಾಗೂ ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ವಿರುದ್ಧ ಅಮೃತಾ ಎಂಬಾಕೆ ದೂರು ಸಲ್ಲಿಕೆ ಮಾಡಿದ್ದಾರೆ. ಗೋವರ್ಧನ್, ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ಜೊತೆ ಸಂಪರ್ಕದಲ್ಲಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಅಮೃತಾ, ಗೋವರ್ಧನ್ ಪೋಷಕರಿಗೂ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ, ಸೀಮೆಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಹಿರಿಯ ವಕೀಲೆ ಗ್ರೀಷ್ಮಾ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಕರಣದ ದೂರುದಾರೆಯಾಗಿರುವ ತಮ್ಮ ಕಕ್ಷಿದಾರರು, ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರಾಗಿ ಸೇವೆ ಸಲ್ಲಿಸುತ್ತಿರುವ ಗೋವರ್ಧನ್ ಅವರ ಪತ್ನಿಯಾಗಿದ್ದು, ಅವರು ತಮ್ಮ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಅವರ ಪತಿ, ಅವರ ಮಹಿಳಾ ಪೊಲೀಸ್ ಅಧಿಕಾರಿ ಸ್ನೇಹಿತೆ ಮತ್ತು ಮಹಿಳಾ ಅಧಿಕಾರಿಯ ಪೋಷಕರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿ ಅಧಿಕಾರಿ ದೂರುದಾರ ಮಹಿಳೆಯನ್ನು 2014 ರಲ್ಲಿ ಮದುವೆಯಾಗಿದ್ದು, ಅವರಿಗೆ ಎಂಟು ವರ್ಷದ ಮಗುವಿದೆ. ಪೊಲೀಸ್ ಸೇವೆಗೆ ಸೇರುವ ಮೊದಲು, ಆರೋಪಿ ಅಧಿಕಾರಿ ವೈದ್ಯನಾಗಿ ಕೆಲಸ ಮಾಡುತ್ತಿದ್ದರು.
ಅವರು ಪ್ರಸ್ತುತ ಬೆಂಗಳೂರಿನ ಸೈಬರ್ ಅಪರಾಧ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮಹಿಳಾ ಪೊಲೀಸ್ ಅಧಿಕಾರಿ ಕಾರವಾರ ನಗರದ ಸೈಬರ್ ಅಪರಾಧ ಶಾಖೆಯಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.