
ಜಿಲ್ಲೆಯಲ್ಲಿ ಮತ್ತೊಮ್ಮೆ ಜಾರಕಿಹೊಳಿ ಸಹೋದರರೇ ಸುಪ್ರೀಂ

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಜಾರಕಿಹೊಳಿ ಸಹೋದರರ ಆಶಿರ್ವಾದದಿಂದ ಬೆಳಗಾವಿ ರಾಜಕಾರಣದಲ್ಲಿ ಗೆಲುವು ಸಾಧಿಸುವುದು ಅಷ್ಟೊಂದು ಸುಲಭವಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಹೊಂದಿರುವ ಹಿಡಿತದಿಂದ ಯಾವುದೇ ಚುನಾವಣೆಯಾದರು ಅವರ ಬೆಂಬಲ ಅನಿವಾರ್ಯವಾಗುವುದು ಸತ್ಯ.
ಹೌದು ಕಳೆದ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಕಡಿಮೆ ಅಂತರದ ಗೆಲುವು ಸಾಧಿಸಿದ್ದರು. ಆ ಸಂದರ್ಭದಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಸ್ವ ಕ್ಷೇತ್ರವಾದ ಗೋಕಾಕ್ ನಲ್ಲಿ ಇಪ್ಪತ್ತು ಸಾವಿರಕ್ಕಿಂತ ಅಧಿಕ ಅಂತರದ ಮತಗಳನ್ನು ಬಿಜೆಪಿಗೆ ಕೊಡಿಸುವ ಮೂಲಕ ಮೊದಲಬಾರಿಗೆ ಮಹಿಳಾ ಸಂಸದರೊಬ್ಬರು ಲೋಕಸಭಾ ಮೆಟ್ಟಲು ಹತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನೂ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ವೈಯಕ್ತಿಕ ವರ್ಚಸ್ಸನ್ನು ಪ್ರದರ್ಶಿಸಿದ್ದರು. ಜಿಲ್ಲೆಯಲ್ಲಿ ಯಾವುದೇ ಚುನಾವಣೆಯಾದರು ಜಾರಕಿಹೊಳಿ ಸಂಹೋದರರ ಬೆಂಬಲ ಇಲ್ಲದೆ ಗೆಲುವು ಸಾಧಿಸುವುದು ಅಷ್ಟೊಂದು ಸುಲಭದ ಮಾತಲ್ಲ.
ಈ ಬಾರಿಯ ಪರಿಷತ್ ಚುನಾವಣೆಯಲ್ಲಿಯೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಬಾರಿ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಾರಿ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಈ ಚುನಾವಣೆ ಎದುರಿಸುವ ಮಾತನ್ನಾಡಿದ್ದರು. ಅಷ್ಟೇ ಅಲ್ಲದೆ ಇವರ ಆಶಿರ್ವಾದದಿಂದ ಮಾತ್ರ ನಾವು ಗೆಲುವು ಸಾಧಿಸಲು ಸಾಧ್ಯ ಎಂಬ ಮಾತನ್ನು ಪ್ರಚಾರದ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಜಾರಕಿಹೊಳಿ ಸಹೋದರರಲ್ಲಿ ಪ್ರಮುಖರಾಗಿರುವ ರಮೇಶ್ ಜಾರಕಿಹೊಳಿ ವರ್ಚಸ್ಸಿನಿಂದ ಪಕ್ಷೇತರ ಅಭ್ಯರ್ಥಿ ಸಹೋದರ ಲಖನ್ ಜಾರಕಿಹೊಳಿ ಗೆಲುವು ಸಾಧಸಿದ್ದು ಮತ್ತೊಮ್ಮೆ ತಮ್ಮ ಸಾಮಥ್ರ್ಯ ಏನು ಎಂಬುದನ್ನು ತೋರಿಸಿದ್ದಾರೆ. ಪ್ರಭಲ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಠಗಿಮಠ ಸೋಲಲು ಪ್ರಮುಖ ಕಾರಣವೇ ರಮೇಶ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಬೆನ್ನಿಗೆ ನಿಂತಿದ್ದು.
ಒಟ್ಟಿನಲ್ಲಿ ಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಹಿಡಿತ ಹೊಂದಿರುವ ಜಾರಕಿಹೊಳಿ ಸಹೋದರರು ಯಸವುದೇ ಚುನಾವಣೆ ಇರಲಿ ಅವರು ಬಬಲಿಸುವ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬುದನ್ನು ಆಗಾಗ್ಗೆ ಸ್ಪಷ್ಟಪಡಿಸಿದ್ದಾರೆ. ಹದಿಮೂರು ಶಾಸಕರಿರುವ ಬಿಜೆಪಿ ಪಕ್ಷ ಕೇವಲ ಒಂದು ಸೀಟು ಗೆಲ್ಲಲ್ಲು ಸಾಧ್ಯವಾಗದೆ ಇರುವುದು ಜಾರಕಿಹೊಳಿ ಕುಟುಂಬದ ಶಕ್ತಿ ತೋರುತ್ತದೆ.