ಮಳೆ ಅಬ್ಬರಕ್ಕೆ ತತ್ತರಿಸಿದ ಬೆಳಗಾವಿ
ಬೆಳಗಾವಿ : ಶನಿವಾರ ಜಿಲ್ಲೆಯಾದ್ಯಂತ ಸುರಿದ ಬಾರೀ ಮಳೆಗೆ ಜನಜೀವನದ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿಟ್ಟು, ಬಿಡದೆ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ಬೆಳಗಾವಿ ನಗರದ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು ಅಂಗಡಿ, ಮುಗಟ್ಟು ಮಾಲಿಕರು ಸಂಕಷ್ಟ ಅನುಭವಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಆರ್ಭಟಕ್ಕೆ ಬೆಳಗಾವಿ ನಗರದ ರೈಲ್ವೆ ನಿಲ್ದಾಣ ರಸ್ತೆ, ಹಳೆ ಪಿ.ಬಿ ರಸ್ತೆ, ಪಾಲಿಕೆ ಕಾಂಪ್ಲೆಕ್ಸ್ ಸೇರಿ ಅನೇಕ ಪ್ರಶಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿದ್ದು ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದೆ. ಪಾಲಿಕೆ ಕಾಂಪ್ಲೆಕ್ಸ್ ನಲ್ಲಿರುವ ಸುಮಾರು ಮಳಿಗೆಗಳಿಗೆ ಮಳೆ ನೀರು ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಬೆಲೆಬಾಳುವ ವಸ್ತುಗಳು ನೀರುಪಾಲಾಗಿವೆ.
ಗ್ಲೋಬ್ ಚಿತ್ರಮಂದಿರ ಸುತ್ತ ಮಳೆ ನೀರು ಸುತ್ತುವರಿದಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಅಷ್ಟೇ ಅಲ್ಲದೆ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅನೇಕ ಪ್ರದೇಶಗಳಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತ ಪರಿಣಾಮ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗುತ್ತಿವೆ. ನಗರದಲ್ಲಿ ಇಷ್ಟೇಲ್ಲ ಅವಾಂತರ ಸೃಷ್ಟಿಯಾಗಿದ್ದರು ಪಾಲಿಕೆ ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂಧಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ರೈತರ ಮೊಗದಲ್ಲಿ ಮಂದಹಾಸ
ಇನ್ನೂ ಬೆಳಗಾವಿ ನಗರ ಮಾತ್ರವಲ್ಲದೆ ಜಿಲ್ಲೆಯ ಅಥಣಿ, ಮೂಡಲಗಿ, ಕಾಗವಾಡ, ಕುಡಚಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ರೈತರಲ್ಲಿ ನಿರಾಳತೆ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಹನಿ ನೀರಿಗಾಗಿ ಪರದಾಡುತ್ತಿದ್ದವರಿಗೆ ಮಳೆ ಜೀವ ತುಂಬಿದೆ. ಅಷ್ಟೇ ಅಲ್ಲದೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಸಧ್ಯ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ.
ಶನಿವಾರ ಅಥಣಿ ತಾಲೂಕಿನಲ್ಲಿ ಸುಮಾರು ಎರಡು ಘಂಟೆಗೂ ಹೆಚ್ಚುಕಾಲ ಸುರಿದ ಮಳೆಯಿಂದ ಕಬ್ಬಿನ ತೋಟಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ನೀರಿಲ್ಲದೆ ಒಣಗುತ್ತಿದ್ದ ಬೆಳೆಗಳಿಗೆ ಕೊಂಚ ಜೀವ ಬಂದಂತಾಗಿದ್ದು, ಜನ ಜಾನುವಾರುಗಳಿಗೂ ಮೇವು ಲಭಿಸುತ್ತದೆ. ಮಳೆಯಿಂದ ನಗರ ಪ್ರದೇಶದ ಜನರಿಗೆ ಸಂಕಷ್ಟ ಎದುರಾಗಿದ್ದರೆ ಇತ್ತ ಅನೇಕ ತಾಲೂಕಿನ ರೈತರ ಮೊಗದಲ್ಲಿ ನಗು ಮೂಡಿಸಿದು ವಿಶೇಷ.
ಶನಿವಾರ ಸುರಿದ ಮಳೆಯಿಂದ ಶಹಾಪುರ ಬಸವಣ್ಣ ಗಲ್ಲಿಯಲ್ಲಿ ದರ್ಶನ ಪಾವಸೆ ಎಂಬುವವರ ಮನೆ ದರೆಗುರುಳಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಿರಂತರ ಮಳೆಯ ಕಾರಣ ಹಳೆಯ ಮನೆಗಳು ನೆನೆಯುತ್ತಿದ್ದು ಜನ ಭಯದಿಂದ ಸಮಯ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.