Select Page

ಲಿಂಗಾಯತರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟ ; ಬಾಲಚಂದ್ರ ಜಾರಕಿಹೊಳಿ

ಲಿಂಗಾಯತರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟ ; ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ ಸ್ಪರ್ಧೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿಯೂ ನಾನು ಅಧ್ಯಕ್ಷ ಸ್ಥಾನ ಆಕಾಂಕ್ಷಿಯೂ ಅಲ್ಲ. ಮುಂದೆ ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ
ಹೇಳಿದರು.

ನಗರದಲ್ಲಿ ಬುಧವಾರ ನಡೆದ ಬಿಡಿಸಿಸಿ ಬ್ಯಾಂಕ್‌ನ ಸಾಮಾನ್ಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ಮಾಜಿ ಶಾಸಕರು, ಕೆಲವು ನಾಯಕರು ಕೂಡ ಬಿಡಿಸಿಸಿಗೆ ಬರಬೇಕು ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸತೀಶ ಜಾರಕಿಹೊಳಿ, ಡಾ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ,ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆಯ ತಂಡವು ಬಲಿಷ್ಠವಾಗಿದೆ.

ಆರಂಭದಿಂದಲೂ ಈ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವ್ಯತ್ಯಾಸವಿಲ್ಲದೆ, ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಎಲ್ಲ ಕಡೆ ತಾವು ಕೂಡ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಕೆಲವೊಂದು ಕಡೆ ನಾಮ್‌ ಕೆ ವಾಸ್ತೆ ಚುನಾವಣೆ ಆಗಬಹುದು. ಮತ್ತೊಂದೆಡೆ ಜೋರಾಗಿ ಆಗಬಹುದು ಎಂದರು.

ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸಮಾಧಾನದಿಂದ ಶಾಂತ ರೀತಿಯಿಂದ ಮುಗಿತು. ಎಲ್ಲವೂ ಒಳ್ಳೆಯದಾಯಿತು ಎಂದರು. ಕೆಲವು ನಿರ್ದೇಶಕರು ಸಭೆಗೆ ಬಾರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ನಿರ್ದೇಶಕರಿಗೆ ಆಹ್ವಾನ ನೀಡಲಾಗಿತ್ತು. ಶಾಸಕ ಲಕ್ಷ್ಮಣ ಸವದಿ ಅವರು ಬೆಂಗಳೂರಿಗೆ ಹೋಗಿದ್ದರು. ಬೇರೆ ಬೇರೆ ಕಾರಣಗಳಿಂದ ಕೆಲವರು ಸಭೆಯಿಂದ ದೂರ ಉಳಿದಿದ್ದಾರೆ. ಸಾಮಾನ್ಯ
ಸಭೆಗೆ ಕೆಲವರು ಗೈರಾಗಿರುತ್ತಾರೆ. ಒಟ್ಟಿನಲ್ಲಿ ಸಾಮಾನ್ಯ ಸಭೆ ಶಾಂತ ರೀತಿಯಿಂದ ನಡೆಯಿತು ಎಂದರು.

ಅಕ್ಟೋಬರ್‌ 19ರಂದು ಚುನಾವಣೆ ನಿಗದಿಯಾಗಿದೆ. ಪ್ರಚಾರ ಕೂಡ ಮಾಡುತ್ತಿದ್ದೇವೆ. ರಾಯಬಾಗ, ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ ತಾಲೂಕುಗಳಲ್ಲಿ ಪ್ರಚಾರ ಮಾಡುವುದು ಉಳಿದಿವೆ. ಅಲ್ಲಿಯು ಕೂಡ ಆ.5 ಅಥವಾ 6ರೊಳಗೆ ಚುನಾವಣೆ ಪ್ರಚಾರ ಮಾಡಿ ಮುಗಿಸುತ್ತೇವೆ. ಇದರಿಂದ ಎಲ್ಲ ತಾಲೂಕುಗಳಲ್ಲಿ ಬಿಡಿಸಿಸಿ ಬ್ಯಾಂಕ್‌ ಚುನಾವಣೆಯ ಪ್ರಚಾರ ಮುಗಿದಂತೆ
ಆಗುತ್ತದೆ ಎಂದು ತಿಳಿಸಿದರು.

ಕೊಲ್ಹಾಪುರದಲ್ಲಿ ನಡೆದ ಸಭೆಯ ಪರಿಣಾಮ ಏನಾದರೂ ಬೀರಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪೂಜ್ಯ ಸ್ವಾಮೀಜಿಯವರು ಎಲ್ಲರನ್ನು ಸಭೆಗೆ‌ ಕರೆದಿದ್ದರು. ಹೀಗಾಗಿ ನಮ್ಮ ಕಡೆಯವರು, ಬೇರೆಯವರು ಹೋಗಿದ್ದರು. ಬೆಳಗಾವಿಯಲ್ಲಿ‌ ಹಾಸ್ಟೆಲ್ ಕಟ್ಟಬೇಕು ಎಂಬುವುದು ಕೂಡ ಅಲ್ಲಿ ಚರ್ಚೆಯಾಯಿತು. ಅದರಂತೆ ಸಭೆ ಕರೆದಾಗ ರಾಜಕೀಯ ಕೂಡ ಚರ್ಚೆ ಆಗಿಯೇ ಆಗುತ್ತದೆ.

ಹೀಗಾಗಿ ಅಲ್ಲಿ ಸಭೆಯ ನಂತರ ಅಣ್ಣಾಸಾಹೇಬ‌‌ ಜೊಲ್ಲೆ, ಮಹಾಂತೇಶ ದೊಡ್ಡಗೌಡರ ಸೇರಿದಂತೆ ಎಲ್ಲರೂ ಸಭೆ ಮಾಡಿ ಮುಂದೇನು ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಶಾಂತ ರೀತಿಯಿಂದ ಚುನಾವಣೆ ನಡೆಯುತ್ತದೆ. ಎಲ್ಲವನ್ನು ಅವಿರೋಧ ಆಯ್ಕೆಗೆ ಪ್ರಯತ್ನ ಮಾಡುತ್ತೇವೆ. ಎಲ್ಲಿ ಅವಿರೋಧ ಆಯ್ಕೆ ಆಗುವುದಿಲ್ಲವೋ ಅಲ್ಲಿ ಚುನಾವಣೆ ಮಾಡುತ್ತೇವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗೋಡೆ, ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ರಾಜೇಂದ್ರ ಅಂಕಲಗಿ, ನೀಲಕಂಠ ಕಪ್ಪಲಗುದ್ದಿ, ಎಸ್.ಎಸ್.ಢವಣ, ಸತೀಶ ಕಡಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!