
ಯಾರಿಗೆ ಸಿಂಹಾಸನ…? ಚದುರಂಗದಾಟದಲ್ಲಿ ಗೆಲ್ಲುವುದಾ ಜಾರಕಿಹೊಳಿ ಕುಟುಂಬ…!

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೇವಲ ಒಂದು ದಿನ ಬಾಕಿ ಉಳಿದಿದ್ದು ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಗದ್ದುಗೆ ಏರುವವರು ಯಾರು ಎಂಬ ಲೆಕ್ಕಾಚಾರ ಜೋರಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕಾಂಗ್ರೆಸ್ ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣದಲ್ಲಿ ಇದ್ದಾರೆ. ಇಬ್ಬರು ಪ್ರಭಲ ಅಭ್ಯರ್ಥಿಗಳಾಗಿದ್ದು ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ.
ಇನ್ನೂ ಚಿಕ್ಕೋಡಿಯಿಂದ ಜಾರಕಿಹೊಳಿ ಮನೆತನದ ಕುಡಿ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ನಿಂದ ಕಣದಲ್ಲಿ ಇದ್ದರೆ ಇತ್ತ ಬಿಜೆಪಿ ಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸ್ಪರ್ಧೆ ಮಾಡಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಎರಡು ಕ್ಷೇತ್ರದಲ್ಲಿ ಪೈಪೋಟಿ ಏರ್ಪಟ್ಟಿದ್ದು ಗೆಲುವಿನ ಹಾರ ಯಾರಿಗೆ ಎಂಬುದು ನಾಳೆ ತಿಳಿಯಲಿದೆ.
ಮೊದಲಬಾರಿಗೆ ಜಾರಕಿಹೊಳಿ ಮನೆತನದ ಕುಡಿ ಕಣಕ್ಕೆ ಇಳಿದ ಕಾರಣ ಸಹೋದರರು ಒಂದುಗೂಡಿ ಕುಟುಂಬದ ಕುಡಿ ಗೆಲ್ಲಿಸುವರಾ ಎಂಬ ಚರ್ಚೆ ಜೋರಾಗಿದೆ. ಒಂದುವೇಳೆ ಚಿಕ್ಕೋಡಿ ಅಖಾಡ ಗೆದ್ದರೆ ಜಾರಕಿಹೊಳಿ ಸಾಮ್ರಾಜ್ಯ ವಿಸ್ತರಣೆ ಆಗುವುದರಲ್ಲಿ ಎರಡು ಮಾತಿಲ್ಲ. ಪ್ರಿಯಾಂಕಾ ಸ್ಪರ್ಧೆಯಿಂದ ಕೇವಲ ಕಾಂಗ್ರೆಸ್ ಮಾತ್ರವಲ್ಲದೆ ಜಾರಕಿಹೊಳಿ ಕುಟುಂಬದ ಮುಂದಿನ ರಾಜಕೀಯ ಭವಿಷ್ಯ ಅಡಗಿದೆ.
ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ಜನ ವಿರೋಧಿ ಅಲೆ ಬಿಜೆಪಿಗೆ ಹಿನ್ನಡೆ ಆಗುವ ಲೆಕ್ಕಾಚಾರ ಕ್ಷೇತ್ರದಲ್ಲಿ ಇದೆ. ಹಾಗೆಯೇ ಯುವ ಅಭ್ಯರ್ಥಿಯನ್ನು ಬೆಂಬಲಿಸಿದರೆ ಅಭಿವೃದ್ಧಿಗೆ ಅನುಕೂಲ ಆಗುತ್ತವೆ ಎಂಬುದು ಮತದಾರರ ಅಭಿಪ್ರಾವೂ ಇದ್ದೇ ಇದೆ. ಈ ಕಾರಣದಿಂದ ಚಿಕ್ಕೋಡಿಯನ್ನು ಕಾಂಗ್ರೆಸ್ ಗೆಲ್ಲುಬಹುದು ಎಂದು ಹೇಳಲಾಗುತ್ತಿದೆ.
ಇನ್ನೂ ಬೆಳಗಾವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದ್ದು ಕೊನೆ ಕ್ಷಣದಲ್ಲಿ ಯಾರಿಗಾದರೂ ವಿಜಯಮಾಲೆ ಸಿಗಬಹುದು. ಒಂದು ಕಡೆ ಮೋದಿ ಅಲೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವರ್ಚಸ್ಸು ಈ ರೀತಿಯ ಪೈಪೋಟಿಗೆ ಎಡೆಮಾಡಿಕೊಟ್ಟಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಬೆಳಗಾವಿ ಗೆದ್ದು ತಮ್ಮ ಶಕ್ತಿಯನ್ನು ರಾಜ್ಯಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಒಳ್ಳೆಯ ಅವಕಾಶ ಇದಾಗಿದ್ದು ಮತದಾರ ಕೈ ಹಿಡಿಯುವನಾ ಎಂಬುದನ್ನು ಕಾದು ನೋಡಬೇಕು. ಇನ್ನೂ ಪ್ರಭಲ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅಷ್ಟು ಸಲೀಸಾಗಿ ಸೋಲು ಒಪ್ಪಿಕೊಳ್ಳುವರಾ ಎಂಬ ಮಾತು ಕ್ಷೇತ್ರದಲ್ಲಿದೆ.