
ಬೆಳಗಾವಿ ಜಿಲ್ಲಾ ನೂತನ ಎಸ್ಪಿಯಾಗಿ ಡಾ. ಸಂಜೀವ ಪಾಟೀಲ ಅಧಿಕಾರ ಸ್ವೀಕಾರ

ಬೆಳಗಾವಿ : ಬೆಳಗಾವಿ ಜಿಲ್ಲೆ ಚಾರಿತ್ರಿಕವಾಗಿ ಸದೃಢ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಸೇವೆ ಸಲ್ಲಿಸುವುದು ಒಂದು ಗೌರವದ ವಿಷಯವಾಗಿದೆ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹೇಳಿದರು.
ಸೋಮವಾರ ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ ವರ್ಗಾವಣೆಯಾಗಿರುವ ಲಕ್ಷ್ಮಣ ನಿಂಬರಗಿ ಅವರಿಂದ ಅಧಿಕಾರ ಸ್ವೀಕರಿಸಿಕೊಂಡು ಮಾಧ್ಯಮವರೊಂದಿಗೆ ಮಾತನಾಡಿದರು. ಜಿಲ್ಲೆಯ ಎಲ್ಲ ಸ್ಥರದ ಜನರಿಗೆ ಪೊಲೀಸ್ ವ್ಯವಸ್ಥೆಯಿಂದ ಅನಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.
ಕಳೆದ ಮೂರು ವರ್ಷಗಳಿಂದ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅತ್ಯಂತ ಉತ್ತಮ ಕಾರ್ಯಗಳನ್ನು ಕೈಗೊಂಡಿದೆ. ಇನ್ನು ಮುಂದೆಯೂ ಅದೇ ಮಾದರಿಯಲ್ಲಿ ಮುಂದುವರೆಸಲಾಗುವುದು. ಅಲ್ಲದೆ, ಅವರಿಂದ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದರು.
ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕಳೆದ ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಸಮಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. 2019-20 ಪ್ರವಾಹ,2020-21 ಕೊರೊನಾ ಸೋಂಕು, ಲೋಕಸಭಾ ಉಪಚುನಾವಣೆ, ಎರಡು ವಿಧಾನ ಪರಿಷತ್ ಚುನಾವಣೆ ಹಾಗೂ ಇನ್ನಿತರ ಘಟನಾವಳಿಗಳು ನಡೆದಾಗಲೂ ಸಹ ಪೊಲೀಸ್ ಇಲಾಖೆಗೆ ಶಿಸ್ತುಬದ್ಧವಾಗಿ ಎದುರಿಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಯಶಸ್ವಿಯಾಗಿದ್ದೇವೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 13 ಹೊಸ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ನಾಲ್ಕು ಪೊಲೀಸ್ ಠಾಣೆಗಳ ಉದ್ಘಾಟನೆಗೆ ಸಿದ್ಧವಾಗಿದೆ. 300ಕ್ಕೂ ಅಧಿಕ ಪೊಲೀಸ್ ವಸತಿ ಗೃಹಗಳನ್ನು ಸರಕಾರ ಮಂಜೂರು ಮಾಡಿದ್ದು, ಈ ಪೈಕಿ 108 ವಸತಿ ಗೃಹಗಳು ಉದ್ಘಾಟನೆಗೆ ಸಿದ್ಧಗೊಂಡಿವೆ ಎಂದ ಅವರು, ಜಿಲ್ಲೆಯ ಎಲ್ಲರಿಗೂ ಮೂರು ವರ್ಷಗಳ ಕಾಲ ಜನಸ್ನೇಹಿ ಪೊಲೀಸ್ ಆಡಳಿತಕ್ಕೆ ಸಹಕರಿಸಿದ್ದಕ್ಕೆ ಧನ್ಯವಾದ ತಿಳಿಸಿದರು.