
ಕೇಸರಿ ಪ್ರವಾಹದ ಮಧ್ಯೆ “ಮಹಾರಾಜ” ವಿರಾಜಮಾನ

ಬೆಳಗಾವಿ : ಜಿಲ್ಲಾಡಳಿತ ಸೇರಿದಂತೆ ಕೆಲ ಮುಖಂಡರ ವಿರೋಧದ ಮಧ್ಯೆಯೂ ಅನಗೋಳದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ 21 ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡುವಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಯಶಸ್ವಿಯಾಗಿದ್ದಾರೆ.
ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಕೊನೆಗೂ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕೇಸರಿ ಪ್ರವಾಹದ ಮಧ್ಯೆ ಅದ್ದೂರಿಯಾಗಿ ಕಾರ್ಯಕ್ರಮ ಜರುಗಿದೆ.
ಅನಗೋಳದ ಡಿವಿಎಸ್ ಚೌಕ್ ನಲ್ಲಿ ನೂತನವಾಗಿ ನಿರ್ಮಿಸಿದ್ದ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಕಳೆದ ಒಂದು ವಾರದ ಹಿಂದೆಯೇ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಂದೂಡುವಂತೆ ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ್ ಕೊಂಡೂಸ್ಕರ್ ನೇತೃತ್ವದ ತಂಡ ಆಗ್ರಹಿಸಿತ್ತು. ಇದಕ್ಕೆ ಜಿಲ್ಲಾಡಳಿತವೂ ಧ್ವನಿಗೂಡಿಸಿ ಕಾರ್ಯಕ್ರಮ ಮುಂದೂಡುವ ಪ್ರಯತ್ನ ನಡೆಸಲಾಗಿತ್ತು.
ಆದರೆ ಇದಕ್ಕೆ ಸೊಪ್ಪು ಹಾಕದ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಪೂರ್ವನಿರ್ಧರದಂತೆ ಭಾನುವಾರ ಶುಭ ಮುಹೂರ್ತದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅನಗೋಳ ನಾಕಾದಿಂದ 2 ಸಾವಿರಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ ಹೊತ್ತು ಐನೂರಕ್ಕೂ ಅಧಿಕ ಯುವಕರು ವಾದ್ಯಗಳ ಮೂಲಕ ಬೃಹತ್ ಶೋಭಾಯಾತ್ರೆ ಮೂಲಕ ಮೂರ್ತಿ ಉದ್ಘಾಟನೆ ನೆರವೇರಿತು.