ಜಿಲ್ಲಾಧಿಕಾರಿ ಖಡಕ್ ನಿರ್ಧಾರಕ್ಕೆ ಕನ್ನಡಿಗರ ಹರ್ಷ : ಮಹಾ ಸಚಿವರಿಗೆ ಗಡಿಯಲ್ಲಿ ಬ್ರೆಕ್
ಬೆಳಗಾವಿ : ಗಡಿಯಲ್ಲಿ ಭಾಷಾ ವಿಷ ಬೀಜ ಬಿತ್ತುವ ಮೂಲಕ ಕನ್ನಡ ಹಾಗೂ ಮರಾಠಿ ಭಾಷಿಕರ ಮಧ್ಯೆ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಲು ಇಂದು ಬೆಳಗಾವಿಗೆ ಭೇಟಿ ನೀಡಲಿದ್ದ ಮಹಾರಾಷ್ಟ್ರದ ಗಡಿ ಸಮನ್ವಯ ಸಮೀತಿಯ ಇಬ್ಬರು ಸಚಿವರು ಜಾಗೂ ಓರ್ವ ಸಂಸದರ ಭೇಟಿಗೆ ನಿರ್ಬಂಧವಿಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಗಡಿ ಭಾಗದ ಮರಾಠಿ ಭಾಷಿಕರ ಭೇಟಿ ನೆಪದಲ್ಲಿ ಬೆಳಗಾವಿಗೆ ಇಂದು ಆಗಮಿಸಲಿದ್ದ ಮಹಾರಾಷ್ಟ್ರದ ಗಡಿ ಸಮನ್ವಯ ಸಮೀತಿ ಸದಸ್ಯರಾದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್, ಅಬಕಾರಿ ಸಚಿವ ಶಂಬುರಾಜ ದೇಸಾಯಿ ಹಾಗೂ ಸಂಸದ ಧೈರ್ಯಶೀಲ ಮಾನೆ ಮೂವರಿಗೆ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಮಹಾರಾಷ್ಟ್ರಕ್ಕೆ ಭಾರಿ ಮುಖಭಂಗವಾಗಿದೆ. ಸೋಮವಾರ ಸಂಜೆ ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಹಾ ಸಚಿವರ ಬೆಳಗಾವಿ ಭೇಟಿಗೆ ನಿರ್ಬಂಧ ವಿಧಿಸುವ ಮೂಲಕ ಗಟ್ಟಿ ನಿರ್ಧಾರ ಪ್ರಕಟಿಸಿದರು.