ಬೆಳಗಾವಿ : ಏತ ನೀರಾವರಿ ಕಾಲುವೆಗೆ ಕೆಮಿಕಲ್ ಮಿಶ್ರಿತ ನೀರು ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಅಥಣಿ : ಹಲ್ಯಾಳ – ತುಂಗಳ ಏತ ನೀರಾವರಿ ಕಾಲುವೆಯಲ್ಲಿ ಸಕ್ಕರೆ ಕಾರ್ಖಾನೆಗಳ ತ್ಯಾಜ್ಯದ ನೀರು ಹರಿಸಿದ ಪರಿಣಾಮವಾಗಿ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಕೋಕಟನೂರ ಗ್ರಾಮದ ಮುಖಾಂತರ ತುಂಗಳ ಗ್ರಾಮದ ಕಾಲುವೆಯಲ್ಲಿ ಸ್ಥಳೀಯ ಸಕ್ಕರೆ ಕಾರ್ಖಾನೆಗಳು ಕೆಮಿಕಲ್ ಮಿಶ್ರಿತ ನೀರು ಹರಿಸಲಾಗುತ್ತಿದೆ.
ಕಾಲುವೆ ಮುಖಾಂತರ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಸೇರುತ್ತಿದ್ದು ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಿಸಿದೆ.
ಈ ಕುರಿತು ಸ್ಥಳೀಯರಾದ ಮುತ್ತಪ್ಪ ನಾಯಿಕ್ ಹಾಗೂ ಮಾಳಪ್ಪ ಸುಟ್ಟಟ್ಟಿ ಮಾತನಾಡಿ, ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಲುವೆಯಲ್ಲಿ ಕೆಮಿಕಲ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ನಮ್ಮ ದಿನನಿತ್ಯದ ಬಳಕೆಯಲ್ಲಿ
ಸೇರಿದಂತೆ ಇದೇ ನೀರನ್ನು ಜನ-ಜಾನುವಾರುಗಳಿಗೆ ಕುಡಿಯಲು ನಾವು ನಮಗೆ ಅರಿವಿಲ್ಲದೆಯೇ ಬಳಕೆ ಮಾಡುತ್ತಿದ್ದೇವು. ಆದರೆ ಕಾಲುವೆಯಲ್ಲಿ ಕೆಮಿಕಲ್ ಮಿಶ್ರಿತ ನೀರನ್ನು ಕಂಡು ನಮಗೆ ಅನಾರೋಗ್ಯದ ಆತಂಕ ಕಾಡುತ್ತಿದೆ.
ಅಲ್ಲದೆ ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೀರು ಹರಿಸುತ್ತಿರುವ ದುರುಳರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನೂ ನಮ್ಮ ಕುರಿಗಳು, ದನಗಳು ಈ ನೀರನ್ನು ಹೇಗೆ ಸೇವಿಸಬೇಕು? ಈ ನೀರಿನ ಸೇವನೆಯಿಂದ ಅವು ಅನಾರೋಗ್ಯ ಪೀಡಿತವಾಗುವ ಭಯ ನಮ್ಮಲ್ಲಿ ಕಾಡುತ್ತಿದೆ. ತಾಲೂಕಿನಲ್ಲಿರುವ ಎರಡು ಸಕ್ಕರೆ ಕಾರ್ಖಾನೆಗಳಿವೆ ಅವುಗಳೇ ಇದಕ್ಕೆ ಕಾರಣವಾಗಿವೆ ಎಂದು ಆರೋಪಿಸಿದರು, ಈ ನೀರಿನ
ಸೇವನೆಯಿಂದ ಗಂಭೀರ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಅಧಿಕಾರಿಗಳು ಇಂಥವುಗಳನೆಲ್ಲ ಗಮನಿಸುವುದಿಲ್ಲ. ಜನಸಾಮಾನ್ಯರ ಗೋಳನ್ನು ಕೇಳುವವರು ಯಾರೂ ಇಲ್ಲ ಎಂದು ಹೇಳಿದರು.