Video – ಒಂದೇ ಕಾರಲ್ಲಿ ಸವದಿ & ಜಾರಕಿಹೊಳಿ ; ಮುನಿಸು ಮರೆತರಾ ನಾಯಕರು…?
ಬೆಳಗಾವಿ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಥಣಿಯಲ್ಲಿ ಕಡಿಮೆ ಲೀಡ್ ಸಿಕ್ಕಿದ್ದಕ್ಕೆ ಸವದಿ ವಿರುದ್ಧ ಗರಂ ಆಗಿದ್ದ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗ ಆಕ್ರೋಶ ಹೊರಹಾಕಿದ್ದರು. ಇಬ್ಬರು ನಾಯಕರ ನಡುವೆ ಮಾತಿನ ಸಮರ ಮುಂದುವರಿದಿತ್ತು. ಆದರೆ ಈಗ ಇಬ್ಬರೂ ಮುನಿಸು ಮರೆತು ಒಂದಾದರಾ ಎಂಬ ಮಾತು ಜೋರಾಗಿದೆ.
ಸೋಮವಾರ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಜುಗೂಳ ಗ್ರಾಮಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ವಾಪಸ್ ಚಿಕ್ಕೋಡಿಗೆ ತೆರಳುವ ಸಂದರ್ಭದಲ್ಲಿ ಅವರ ಕಾರಿನಲ್ಲೇ ಲಕ್ಷ್ಮಣ ಅವದಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ತೆರಳಿದರು.
ಚಿಕ್ಕೋಡಿ ಲೋಕಸಭೆಯಿಂದ ಸಚಿವ ಸತೀಶ್ ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕೆ ಇಳಿಸಿದ್ದರು. ಈ ಸಂದರ್ಭದಲ್ಲಿ ಅಥಣಿ ಶಾಸಕ ಸವದಿ ಹಾಗೂ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಕಾಂಗ್ರೆಸ್ ಅಭ್ಯರ್ಥಿಗೆ ಮೋಸ ಮಾಡಿದ್ದಾರೆ ಎಂಬ ಆರೋಪವನ್ನು ಸತೀಶ್ ಜಾರಕಿಹೊಳಿ ಮಾಡಿದ್ದರು.
ಸಧ್ಯ ಇಬ್ಬರೂ ನಾಯಕರ ಮಧ್ಯೆ ಉಂಟಾದ ಜಗಳವನ್ನು ಸರಿಪಡಿಸುವಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಮುಂದಾಳತ್ವ ವಹಿಸಿದ್ದರಾ ಎಂಬ ಮಾತು ಕೇಳಿಬರುತ್ತಿವೆ. ಇಬ್ಬರು ಪ್ರಭಲ ನಾಯಕರ ನಡುವಿನ ಜಗಳ ಪಕ್ಷಕ್ಕೆ ಡ್ಯಾಮೆಜ್ ಮಾಡುತ್ತದೆ ಎಂಬ ಲೆಕ್ಕಾಚಾರದಲ್ಲಿ ಮಾತುಕತೆ ನಡೆದಿರಬಹುದು ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.