ಮನೆ ಕುಸಿದು ಮಹಿಳೆಗೆ ಗಾಯ: ಆಸ್ಪತ್ರೆಗೆ ಧಾವಿಸಿ ಆರೊಗ್ಯ ವಿಚಾರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ನಿರಂತರ ಮಳೆಯಿಂದಾಗಿ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಮಹಿಳೆಯೋರ್ವಳು ಗಾಯಗೊಂಡಿದ್ದು, ಸಚಿವೆ ಹೆಬ್ಬಾಳ್ಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಪಾರ್ವತಿ ಹೊದೆಪ್ಪ ಹುದಲಿ (31) ಎಂಬ ಮಹಿಳೆ ಮನೆ ಗೋಡೆ ಕುಸಿದ ಘಟನೆಯಲ್ಲಿ ಗಾಯಗೊಂಡಿದ್ದಾಳೆ. ಆಕೆಯ ಕೈಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಜಿಲ್ಲಾಸ್ಪತ್ರೆಗೆ ದೌಡಾಯಿಸಿ ಗಾಯಾಳು ಮಹಿಳೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಮನೆ ಕಳೆದುಕೊಂಡ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ವಿತರಿಸಲಾಗುವುದು. ಈಗಾಗಲೇ ಅಧಿಕಾರಿಗಳೊಂದಿಗೆ ಹಾನಿಗೊಳಗಾದ ಮನೆಗಳ ಪರಿಶೀಲನೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನು ಬಡಾಲ ಅಂಕಲಗಿಯಲ್ಲಿ ಮನೆ ಬಿದ್ದು ಗಾಯಗೊಂಡ ಮಹಿಳೆಯ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ವೈಯಕ್ತಿಕವಾಗಿಯೂ ಆರ್ಥಿಕ ಸಹಾಯ ಮಾಡಿರುವುದಾಗಿ ತಿಳಿಸಿದರು.