
ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ ; ಹೆಚ್ಚಿದ ಆತಂಕ

ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಕೃಷ್ಣಾ ನದಿ ಪ್ರವಾಹ ಹೆಚ್ಚಳವಾಗಿದೆ. ಈಗಾಗಲೇ ಜಿಲ್ಲೆಯ 35 ಕ್ಕೂ ಅಧಿಕ ಸೇತುವೆಗಳು ಜಲಾವೃತಗೊಂಡಿದ್ದು ಕೃಷ್ಣಾ ನದಿ ಪಾತ್ರದ ಸುಮಾರು 60 ಕ್ಕೂ ಅಧಿಕ ಗ್ರಾಮಗಳಿಗೆ ನೀರು ಆವರಿಸಿದೆ. ನದಿ ಪಾತ್ರದ ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಖಂಡಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಸಧ್ಯ ಮಳೆ ಆರ್ಭಟ ಕಡಿಮೆಯಾದರು ಪ್ರವಾಹದಲ್ಲಿ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ನದಿ ಪಾತ್ರದ ಜನ ಭಯದಲ್ಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಗೆ ಉಂಟಾಗಿರುವ ಕೃಷ್ಣಾ ನದಿ ಪ್ರವಾಹ ತಗ್ಗುವ ಲಕ್ಷಣ ಕಂಡುಬರುತ್ತಿಲ್ಲ. ನದಿ ಪಾತ್ರದಲ್ಲಿನ ಸುಮಾರು 60ಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿದ್ದು 400 ಕ್ಕೂ ಅಧಿಕ ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಸರೆ ಪಡೆಯುತ್ತಿವೆ.
ಮಹಾರಾಷ್ಟ್ರದ ಸಾಂಗಲಿ, ಮಿರಜ್ ಹಾಗೂ ಕೊಲ್ಹಾಪುರ ಭಾಗದಲ್ಲಿ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದರು ನಗರ ಪ್ರದೇಶಕ್ಕೆ ನುಗ್ಗಿದ್ದ ನೀರು ಕೃಷ್ಣಾ ನದಿಗೆ ಹರಿದುಬರುತ್ತಿದೆ. ವೇದಗಂಗಾ ಹಾಗೂ ದೂದ್ ಗಂಗಾ ನದಿ ಒಳ ಹರಿವು ಏರಿಕೆಯಾಗಿದ್ದು ಸುಮಾರು 3 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ಕೃಷ್ಣಾ ನದಿ ಪ್ರವಾಹಕ್ಕೆ ಅಥಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ ತಾಲೂಕಿನ ನದಿ ಪಾತ್ರದ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು ಇತ್ತ ದೂದಗಂಗಾ ನದಿ ಆರ್ಭಟಕ್ಕೆ ನಿಪ್ಪಾಣಿ ತಾಲೂಕು ಜಲಾವೃತಗೊಂಡಿದೆ. ಈಗಾಗಲೇ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ಆರಂಭಿಸಲಾಗಿದ್ದು 1500 ಕ್ಕೂ ಅಧಿಕ ನಿರಾಶ್ರಿತರು ಗಂಜಿ ಕೇಂದ್ರ ಸೇರಿದ್ದಾರೆ.
ಸಂಪರ್ಕ ಕಳೆದುಕೊಂಡ ಗ್ರಾಮಗಳು : ವೇದಗಂಗಾ ನದಿ ಪ್ರವಾಹಕ್ಕೆ ಸಿಲುಕಿರುವ ನಿಪ್ಪಾಣಿ ತಾಲುಕಿನ ಹುನ್ನರಗಿ ಗ್ರಾಮ ಸಂಪರ್ಕ ಕಳೆದುಕೊಂಡಿದ್ದು ಗ್ರಾಮದ ಸುಮಾರು 50 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಜೊತೆಗೆ ಕೃಷ್ಣಾ ನದಿ ಪಾತ್ರದ ರಾಯಬಾಗ ತಾಲೂಕಿನ ಕೆಮಲಾಪುರ ಗ್ರಾಮದ ನಡುಗಡ್ಡೆಯಾಗಿದ್ದು ಜನರು ಪರದಾಡುತ್ತಿದ್ದಾರೆ.
20 ದಿನದ ಹಸುಗೂಸು ಕಳೆದುಕೊಂಡ ಬಾಣಂತಿಯರ ಸಂಕಟ
ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ್ ಹಾಗೂ ಮೂಡಲಗಿ ತಾಲೂಕಿನ ಹಲವು ಗ್ರಾಮಗಳ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಹನಮವ್ವ ಹಾಗೂ ಲಕ್ಷ್ಮೀ ಎಂಬ ಇಬ್ಬರು ಬಾಣಂತಿಯರು 20 ದಿನದ ಹಸುಗೂಸುಗಳನ್ನು ಕಳೆದುಕೊಂಡು ಬಾಣಂತಿರಯರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ವಡೇರಹಟ್ಟಿಯ ಅಂಗನವಾಡಿಯಲ್ಲಿ ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತ ಬಾಣಂತಿಯರ ಸಂಕಟ ಹೇಳತೀರದಾಗಿದೆ. ತಾಯಿಯ ಮನೆಯಲ್ಲಿ ಬೆಚ್ಚಗೆ ಆರೈಕೆ ಪಡೆಯಬೇಕಿದ್ದ ಬಾಣಂತಿಯರಿಗೆ ಈಗ ಸೂಕ್ತ ಸೌಲಭ್ಯ ಇಲ್ಲದ ಕಾಳಜಿ ಕೇಂದ್ರದಲ್ಲಿ ನೋವಿನಿಂದ ಬದುಕು ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ನಡುಗಡ್ಡೆಯಾದ ಸಪ್ತಸಾಗರ ಗ್ರಾಮ
ಅಥಣಿ ತಾಲೂಕಿನ ಕೃಷ್ಣಾ ನದಿ ಪಕ್ಕದಲ್ಲಿರುವ ಸಪ್ತಸಾಗರ ಗ್ರಾಮ ಪ್ರವಾಹಕ್ಕೆ ಸಿಲುಕಿ ನಡುಗಡ್ಡೆಯಾಗಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ನದಿ ಪಾತ್ರದ ಸುಮಾರು 200 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಮನೆ ಕಳೆದುಕೊಂಡ ಸುಮಾರು 500 ಕ್ಕೂ ಅಧಿಕ ನಿರಾಶ್ರಿತರು ಸುರಕ್ಷಿತ ಸ್ಥಳಕ್ಕೆ ತೆರಳಿದರೆ, ಈವರೆಗೆ ಎರಡು ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿವೆ.