Select Page

Advertisement

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಎನ್. ಬಿ. ಬನ್ನೂರ

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಎನ್. ಬಿ. ಬನ್ನೂರ

ಬೆಳಗಾವಿ : ಕಾಂಗ್ರೆಸ್ ಪಕ್ಷ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ಟಿಕೆಟ್ ನೀಡದೆ ಇರುವುದರಿಂದ ಹೋರಾಟಗಾರ ಎನ್. ಬಿ. ಬನ್ನೂರ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಸೋಮವಾರ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ನಾಮಪತ್ರವನ್ನು ಅವರು ಸಲ್ಲಿಸಿದ್ದಾರೆ.

ಕಳೆದ ಸಲ ಕಡಿಮೆ ಅಂತರದಲ್ಲಿ ಸೋತ ನನಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ. ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ ಇರುವುದರಿಂದ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಕಳೆದ ಮೂವತ್ತು ವರ್ಷಗಳಿಂದ
ಶಿಕ್ಷಕರ ಸಲುವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿರುವೆ. ಶಿಕ್ಷಕರ ಸೇವೆಯನ್ನು ನಿರಂತರ ಕೆಲಸ ಮಾಡುತ್ತಾ ಬಂದಿವೆ.
ಒಟ್ಟಾರೆ ಮೂರೂ ಜಿಲ್ಲೆಗಳ ಮತದಾರರು ಈ ಬಾರಿ ನನ್ನನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ಅವರೆಲ್ಲರ ಆಶೀರ್ವಾದದಿಂದ ನನ್ನ ಗೆಲುವು ಖಚಿತ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಆಯ್ಕೆಯಾಗಿ ಹೋದವರು ಶಿಕ್ಷಕರಿಗಾಗಿ ಯಾವುದೇ ಕೆಲಸವನ್ನು ಮಾಡಿಲ್ಲ, ಶಿಕ್ಷಕರ ಯಾವುದೇ ಬೇಡಿಕೆಯನ್ನು ಈಡೇರಿಸಿಲ್ಲ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಹಾಲಿ ಸದಸ್ಯ ಬಿಜೆಪಿಯ ಅರುಣ ಶಹಾಪುರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೊಬ್ಬ ಅಭ್ಯರ್ಥಿ ಇದ್ದಾರೆ. ಅವರು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದವರೇ ಅಲ್ಲ. ಶಿಕ್ಷಕರ ಸಮಸ್ಯೆಗಳು ಅವರಿಗೆ ಗೊತ್ತೇ ಇಲ್ಲ. ಶಿಕ್ಷಕರ ಬೇಡಿಕೆಯೂ ಏನೆಂದು ಅವರಿಗೆ ಗೊತ್ತಿಲ್ಲ. ಶಿಕ್ಷಕರ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವ  ಇಚ್ಚಾಶಕ್ತಿಯೂ ಅವರಿಗಿಲ್ಲ. ಶಿಕ್ಷಕರ ಹೋರಾಟದ ಇತಿಹಾಸದ ಬಗ್ಗೆ ಯಾವುದೇ ಇಚ್ಛಾಶಕ್ತಿ ಹೊಂದಿರದೇ ಈ ಬಾರಿಯ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಒಟ್ಟಾರೆಯಾಗಿ ಈ ಬಾರಿ ಮೂರು ಜಿಲ್ಲೆಗಳ ಶಿಕ್ಷಕರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಬನ್ನೂರ ಅವರು ಈ ಹಿಂದೆ ಎರಡು ಬಾರಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ, ಈ ಬಾರಿ ಯಾವುದೇ ಕಾರಣಕ್ಕೆ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಹೀಗಾಗಿ ನನ್ನ ಮೇಲೆ ಶಿಕ್ಷಕರು ಅನುಕಂಪ ತೋರಿಸುತ್ತಿದ್ದಾರೆ. ಈ ಬಾರಿ ಶಿಕ್ಷಕರೆಲ್ಲ ಒಗ್ಗಟ್ಟಾಗಿ ನನ್ನನ್ನು ವಿಧಾನ ಪರಿಷತ್ತಿಗೆ ಆರಿಸಿ ಕಳಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಿದರು. ಮತದಾರರು ನನ್ನ ಕೈ ಹಿಡಿಯುವ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್  ಕೇಳಿದ್ದೆ. ಆದರೆ ಆ ಪಕ್ಷ ಟಿಕೆಟ್ ನೀಡಿಲ್ಲ. ಶಿಕ್ಷಕರ ತುಡಿತ ಹೊಂದಿದ್ದ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲಿಲ್ಲ ಎಂಬ ಆಕ್ರೋಶ ಶಿಕ್ಷಕರಿಗಿದೆ. ಶಿಕ್ಷಕರ ಈ ಅನುಕಂಪ ನನ್ನ ಪಾಲಿಗೆ ವರದಾನವಾಗಲಿದೆ.  ಎಲ್ಲ ಶಿಕ್ಷಕರ ಅಭಿಲಾಷೆಯ ಮೇರೆಗೆ, ಅವರೆಲ್ಲರ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ತಿಳಿಸಿದರು.

2 ಬಾರಿ ಸೋತರೂ ಶಿಕ್ಷಕರ ಜತೆ ನಿಕಟವಾಗಿ ಸಂಪರ್ಕ ಹೊಂದಿರುವೆ. ಕಳೆದ 30 ವರ್ಷಗಳಿಂದ ಶಿಕ್ಷಕರ ಯಾವುದೇ ಸಮಸ್ಯೆಗಳಿರಲಿ, ಅವುಗಳ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇನೆ. ಇವೆಲ್ಲವನ್ನೂ ಶಿಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿ ನಾನು ಬಹು ದೊಡ್ಡ ಅಂತರದಿಂದ ವಿಧಾನಪರಿಷತ್ ಚುನಾವಣೆ ಪರಿಷತ್ ಗೆ ಆಯ್ಕೆ ಆಗಲಿರುವುದಾಗಿ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!