
ಭಿನ್ನಾಭಿಪ್ರಾಯದ ಕುರಿತು ಏನಂದ್ರು ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಹೆಚ್ಚು ಕಡಿಮೆ ಮುಕ್ತಾಯವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಬಿಜೆಪಿಯಲ್ಲಿ ಎಲ್ಲ ವಿಷಯವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಚರ್ಚೆ ಮಾಡಿದ್ದಾರೆ. ಕೆಲವೊಂದು ವಿಚಾರಗಳನ್ನು ಹೊರಗಡೆ ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿರುವ ಭಿನ್ನಾಭಿಪ್ರಾಯ ಮುಕ್ತಾಯವಾಗಿದೆ. ವಾಯುವ್ಯ ಪದವೀಧರ ಹಾಗೂ ಶಿಕ್ಷಕ ಮತಕ್ಷೇತ್ರದ ಚುನಾವಣೆಯಲ್ಲಿ ಅರುಣ ಶಹಾಪುರ ಹಾಗೂ ಹಣಮಂತ ನಿರಾಣಿ ಅವರ ಪರವಾಗಿ ಎಲ್ಲರೂ ಒಗ್ಗಟ್ಟಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಬೆಳಗಾವಿ ಜಿಲ್ಲೆಯಿಂದ ಅತೀ ಹೆಚ್ಚು ಮತಗಳನ್ನು ಕೊಡಿಸುವ ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಬಿಜೆಪಿಗೆ ಒಳ್ಳೆಯದಾಗಲಿದೆ ಎಂದರು.
ಮುಂಬರುವ ದಿನಗಳಲ್ಲಿ ರಮೇಶ ಜಾರಕಿಹೊಳಿಗೆ ಒಳ್ಳೆಯದಾಗುತ್ತದೆ. ಬೆಳಗಾವಿ ಬಿಜೆಪಿಯ ಸಭೆ ಸಮಾರಂಭಗಳಿಗೆ ಎಲ್ಲದ್ದಕ್ಕೂ ಆಹ್ವಾನ ಇರುತ್ತದೆ. ಜಿಲ್ಲಾ ಬಿಜೆಪಿಯಲ್ಲಿ ಜಾರಕಿಹೊಳಿ ಸಹೋದರರನ್ನು ಕಡೆಗಣನೆ ಮಾಡುತ್ತಿಲ್ಲ. ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಲಖನ್ ಅವರು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ ಎಂದು ಪ್ರತಿಕ್ರಯಿಸಿದರು.