
ಕನ್ನಡದ ಹಿರಿಯ ಪೋಷಕ ನಟ ಸತ್ಯಜಿತ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಸತ್ಯಜಿತ್ (72) ಭಾನುವಾರ ಬೆಳಗಿನಜಾವ ನಿಧನಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ವಯೋಸಹಜ ಖಾಯಿಲೆಯಿಂದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 2 ಗಂಟೆ ಸುಮಾರಿಗೆ ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ. ಹೆಗಡೆ ನಗರದ ಶಬರಿ ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ರ ನಂತರ ಸತ್ಯಜಿತ್ ಅಂತ್ಯಕ್ರಿಯೆ ನಡೆಯಲಿದೆ.
ನಟ ಸತ್ಯಜಿತ್, ವಿಲನ್, ಪೋಷಕ ನಟನಾಗಿ ಗುರುತಿಸಿಕೊಂಡು. ಪುಟ್ನಂಜ, ಆಪ್ತಮಿತ್ರ, ಚೈತ್ರದ ಪ್ರೇಮಾಂಜಲಿ, ಅರುಣ ರಾಗ, ಶಿವ ಮೆಚ್ಚಿದ ಕಣ್ಣಪ್ಪ, ಯುದ್ಧಕಾಂಡ, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಅಪ್ಪು, ಧಮ್, ಅಭಿ, ಉಪ್ಪಿ 2, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಸೇರಿ ಹಲವು ಚಿತ್ರಗಳು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಸತ್ಯಜಿತ್ ನಿಧನದಿಂದ ಕನ್ನಡ ಚಿತ್ರರಂಗ ಆಘಾತಕ್ಕೊಳಗಾಗಿದೆ.