ಆರೂಢ ಪರಂಪರೆ ಮೇಲೆ ಸಿದ್ದೇಶ್ವರ ಶ್ರೀಗಳಿಗೆ ಅಪಾರ ಭಕ್ತಿ
ಆಧ್ಯಾತ್ಮಿಕ ಪ್ರವಚನದ ಮೂಲಕ ನಾಡಿನ ಎಲ್ಲಾ ಭಾಗಗಳಲ್ಲಿ ಖ್ಯಾತರಾಗಿದ್ದರು ಶ್ರೀಗಳು ಯಾವತ್ತೂ ಅಹಂ ಇಲ್ಲದೆ ಸಾಮಾನ್ಯರಂತೆ ಇರುತ್ತಿದ್ದರು. ಆರೂಢ ಪರಂಪರೆ ಮೇಲೆ ವಿಶೇಷ ಅಭಿಮಾನ ಹಾಗೂ ಭಕ್ತಿ ಹೊಂದಿದ್ದ ಶ್ರೀಗಳು ವಿಜಯಪುರ ಶಾಂತಾಶ್ರಮದ ಲಿಂಗೈಕ್ಯ ಅಭಿನವ ಶಿವಪುತ್ರ ಶ್ರೀಗಳ ಜೊತೆ ಉತ್ತಮ ಒಡನಾಟ ಹೊಂದಿದ್ದರು.
ಜೊತೆಗೆ ಶಿವಪುತ್ರ ಶ್ರೀಗಳ ಅದ್ವೈತ ಪಾಂಡಿತ್ಯಕ್ಕೆ ಗೌರವ ನೀಡುತ್ತಿದ್ದ ಶ್ರೀಗಳು ಅವರ ಪ್ರವಚನಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದರು.
ಇದರ ಜೊತೆಗೆ ಆರೂಢ ಪರಂಪರೆಯ ತ್ರಿಮೂರ್ತಿಗಳಾದ ಇಂಚಲ ಭಾರತಿ ಸ್ವಾಮೀಜಿ, ಬೀದರ್ ಶಿವಕುಮಾರ ಸ್ವಾಮೀಜಿ, ಲಿಂಗೈಕ್ಯ ಶಿವಪುತ್ರ ಶ್ರೀಗಳು ಎಲ್ಲೇ ಪ್ರವಚನ ನೀಡುತ್ತಿದ್ದರು ಅಲ್ಲಿ ಸಿದ್ದೇಶ್ವರ ಶ್ರೀಗಳಿದ್ದರೆ ಅದೊಂದು ಮೇಧಾವಿಗಳ ಸಮಾಗಮ ಎಂದೇ ಕರೆಯಲಾಗುತ್ತಿತ್ತು.
ಜೊತೆಗೆ ವಚನ ಸಾಹಿತ್ಯ ಸೇರಿದಂತೆ ಯಾವುದೇ ವಿಷಯಗಳ ಮೇಲೆ ನಿರರ್ಗಳವಾಗಿ ಪ್ರವಚನ ನೀಡುವ ಈ ಎಲ್ಲಾ ಪೂಜ್ಯರನ್ನು ಜನ ಅತ್ಯಂತ ಅಚ್ಚುಮೆಚ್ಚಾಗಿ ಪ್ರೀತಿಸುತ್ತಿದ್ದದ್ದು ವಿಶೇಷ.