ಭೀಕರ ಅಪಘಾತ : ಒಂದೇ ಕುಟುಂಬದ 6 ಜನರ ದುರ್ಮರಣ
ಯಾದಗಿರಿ : ಗುರುವಾರ ತಡರಾತ್ರಿ ಕಾರು ಮತ್ತು ಗೂಡ್ಸ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುರಮಿಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಕೇರಾ(ಕೆ) ಬಳಿ ನಡೆದಿದೆ.
ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅರಕೇರಾ(ಕೆ) ಬಳಿ ಗುರುವಾರ ತಡರಾತ್ರಿ ಈ ದುರಂತ ಸಂಭವಿಸಿದ್ದು, 1 ವರ್ಷದ ಹೆಣ್ಣುಮಗು ಸೇರಿ 6 ಜನ ಮೃತಪಟ್ಟಿದ್ದಾರೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟರಲ್ಲಿ 4 ಜನ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ.ಇವರೆಲ್ಲರೂ ತೆಲಂಗಾಣದ ಕೊಡಂಗಲ್ ಸಮೀಪದ ದರ್ಗಾದಲ್ಲಿ ಜವಳ ಕಾರ್ಯಕ್ರಮ ಹಾಗೂ ಪೂಜೆ ಸಲ್ಲಿಸಿ ಹಟ್ಟಿ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಹೀನಾ ಗಂಡ ವಾಜಿದ್ ಹುಸೇನ್ (30), ಇಮ್ರಾನ್ ತಂದೆ ಮೊಹಮ್ಮದ್ ಖಾನ್ (22) ಇವರು ಯಾದಗಿರಿ ನಗರದ ಚಕ್ರಕಟ್ಟಾ ನಿವಾಸಿಗಳು ಹಾಗೂ ಮೊಹಮ್ಮದ್ ನಾಜರ್ ಹುಸೇನ್ (76), ನುರಜಾಹನ್ ಬೇಗಂ (70), ವಾಜಿದ್ ಹುಸೇನ್ (32), ಉಮೇಜಾ ಎಸ್ (1) ಮೃತರು ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ಬಸವೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.