Select Page

Advertisement

ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ ಸಿಪಿಐ ಸಾಲಿಮಠ ನೇತೃತ್ವದ ತಂಡ ; ಎಸ್ಪಿ ಶ್ಲಾಘನೆ

ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ ಸಿಪಿಐ ಸಾಲಿಮಠ ನೇತೃತ್ವದ ತಂಡ ; ಎಸ್ಪಿ ಶ್ಲಾಘನೆ

ಬೆಳಗಾವಿ : ವಿವಿಧ ರಾಜ್ಯಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸುವ ಮೂಲಕ 15 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಬೈಲಹೊಂಗಲ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೆದ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ‌ ಮಾತನಾಡಿದ ಇವರು.ಜಿಲ್ಲೆಯ ಬೈಲಹೊಂಗಲ, ನೇಸರಗಿ ಸೇರಿದಂತೆ ವಿವಿಧ ಭಾಗದಲ್ಲಿ‌ ನಿರಂತರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನಲೆಯಲ್ಲಿ ಪ್ರಕರಣ ಭೇದಿಸಲು ಬೈಲಹೊಂಗಲ ಡಿಎಸ್ಪಿ ರವಿ ನಾಯಕ್ ಹಾಗೂ ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದ  ಎರಡು ತಂಡ ರಚಣೆ ಮಾಡಲಾಗಿತ್ತು ಎಂದರು.

ಬೈಲಹೊಂಗಲ ಠಾಣೆ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ನೇತೃತ್ವದ ತಂಡ ಬೇರೆ, ಬೇರೆ ರಾಜ್ಯಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರದ ದೀಪಕ ಪವಾರ್ (22), ರಾಹುಲ ಜಾಧವ್ (21) ಇಬ್ಬರು ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಬೆಳಗಾವಿ‌ ಜಿಲ್ಲೆಯ ಬೈಲಹೊಂಗಲ, ನೆಸರಗಿ, ಹುಕ್ಕೇರಿ ಹಾಗೂ ಸಂಕೇಶ್ವರ ವ್ಯಾಪ್ತಿಯಲ್ಲಿ ಹತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಬಂಧಿತರು ನಡೆಸಿದ್ದ 10 ಕಳ್ಳತನ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳಿಂದ  15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಕಳ್ಳತನ ಆರೋಪ‌ ಹೊತ್ತಿರುವ ಮತ್ತೋರ್ವ ಪ್ರಮುಖ ಆರೋಪಿಗೆ ಪೊಲೀಸರು ಬಲೆ ಬೀಸಿದ್ದು, ಆತನನ್ನು ಶೀಘ್ರವೇ ಬಂಧಿಸಲಿದ್ದಾರೆ ಎಂದು ಎಸ್ಪಿ ಮಾಹಿತಿ‌ ನೀಡಿದರು.

ಚಿಕ್ಕೋಡಿ ಭಾಗದಲ್ಲಿ ನಡೆದ ಕಳ್ಳತನ ಪ್ರಕರಣಗಳ ಕುರಿತು ಕೆಲವೊಂದು ಸುಳಿವು ಪತ್ತೆಯಾಗಿದ್ದು, ಒಂದು ತಂಡ ಹೊರ ರಾಜ್ಯದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ಆ ಪ್ರಕರಣಗಳನ್ನು ಬೇಧಿಸುತ್ತೇವೆ. ಹಾಗೆಯೇ ಜಿಲ್ಲೆಯಲ್ಲಿ ಸಿಸಿಟಿವಿಗಳ ಕೊರತೆಯಿದ್ದು, ಈಗಿರುವ ಬಹಳಷ್ಟು ಸಿಸಿಟಿವಿಗಳು ಹಾಳಾಗಿವೆ. ಹೊಸದಾಗಿ ಸಿಸಿಟಿವಿ ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು.

ಪ್ರಕರಣ ಭೇದಿಸಿದ ಬೈಲಹೊಂಗಲ ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದ ತಂಡದಲ್ಲಿ ಬೈಲಹೊಂಗಲ ಪಿಎಸ್ಐ ಗುರುರಾಜ ಕಲಬುರ್ಗಿ, ನೇಸರಗಿ ಪಿಎಸ್ಐ ಮಲ್ಲಿಕಾರ್ಜುನ ‌ಬಿರಾದಾರ ಸೇರಿದಂತೆ ವಿಠ್ಠಲ ದೊಡ್ಡಹೊನ್ನಪ್ಪನವರ್, ಶಂಕರ ಮೆಣಸಿನಕಾಯಿ, ವಿ,ಎಸ್ ಯರಗಟ್ಟಿಮಠ, ಯು,ಹೆಚ್ ಪೂಜೇರಿ, ಚೇತನ್ ಬುದ್ನಿ, ಮಳಗಲಿ, ಡೊಂಬರ, ಅಂಗಡಿ, ಟಕ್ಕಣ್ಣವರ್ ಹಾಗೂ ಪಾಟೀಲ್ ಈ ಎಲ್ಲಾ ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

*****************
ಬೈಲಹೊಂಗಲ ಹಾಗೂ ಯರಗಟ್ಟಿ ಭಾಗದಲ್ಲಿ ನಡೆಯುತ್ತಿದ್ದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಬೈಲಹೊಂಗಲ ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದ ಅಧಿಕಾರಿಗಳ ತಂಡಕ್ಕೆ ವಿಶೇಷ ಅಭಿನಂದನೆ. ಈಗಾಗಲೇ ಜಿಲ್ಲೆಯಾಧ್ಯಂತ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ನೇಮಿಸಲಾಗಿದ್ದು ಮತ್ತಷ್ಟು ಕಟ್ಟೆಚ್ಚರ ವಹಿಸಲಾಗುತ್ತದೆ.

ಭೀಮಾಶಂಕರ ಗುಳೆದ್
ಬೆಳಗಾವಿ ಎಸ್ಪಿ

***************

Advertisement

Leave a reply

Your email address will not be published. Required fields are marked *

error: Content is protected !!