ರಾಜ್ಯದ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಹಾಗೂ ಬೆಂಗಳೂರಿನ ಲೋಕಭವನ ಆವರಣದಲ್ಲಿ ರಾಜ್ಯಪಾಲರ ಆಡಳಿತ ಕಚೇರಿ, ವಿಶೇಷ ಕಾರ್ಯದರ್ಶಿಗಳ ವಸತಿ ಗೃಹ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗಳನ್ನು 27 ಕೋಟಿ ರೂ.ಗಳಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ರವಿವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ ನಿಯಮ-2026ರ ಕರಡು ಅಧಿಸೂಚನೆ ಅನ್ನು ಈಗಾಗಲೇ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದ್ದು, ಅದರಂತೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಿಸಿದರು.
ಅಲೆಮಾರಿ, ಅರೆ ಅಲೆಮಾರಿ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಮನೆಗಳನ್ನು ನಿರ್ಮಿಸುವ ಕುರಿತು 10ಲಕ್ಷ ರೂ.ಗಳ ಘಟಕ ವೆಚ್ಚದಲ್ಲಿ 380ಚದರ ಅಡಿಗಳ ವಿಸ್ತೀರ್ಣದ ಮನೆಗಳ ನಿರ್ಮಾಣ ಮಾಡಲಾಗುವುದು. ರಾಯಚೂರಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಡಿ ಎಐ ಉತ್ಕೃಷ್ಯತಾ ಕೇಂದ್ರವನ್ನು 5ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಒಟ್ಟು 12 ಕೋಟಿ ರೂ., ಜತೆಗೆ, ಬೆಂಗಳೂರಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ ಮತ್ತು ಬಿಡಿಎಸ್ ವಿದ್ಯಾರ್ಥಿಗಳಿಗೆ ಬಾಲಕರ ವಸತಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 83.50 ಕೋಟಿ ರೂ. ಗಳಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಹೋಬಳಿ ನೀರಾವರಿ ಜಲಮಂಡಳಿಯ 116 ಕೆರೆಗಳು ಹಾಗೂ ಗ್ರಾಯತ್ರಿ ಜಲಾಶಯದ ಕುಡಿಯುವ ನೀರು ತುಂಬಿಸುವ ಹಾಗೂ ಅಂತರ್ಜಲ ಅಭಿವೃದ್ಧಿ ಪಡಿಸುವ 244 ಕೋಟಿ ರೂ., ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದ ಅವರು, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಅಮಾನತ್ತಿನಲ್ಲಿರಿಸಿರುವ ರಾಜ್ಯಪಾಲರ ಆದೇಶವನ್ನು ಸಂಪುಟ ಅನುಮೋದಿಸಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಸೇರಿದಂತೆ ಪ್ರಮುಖರಿದ್ದರು.



