ದೆಹಲಿ ಭೇಟಿ ನಂತರ ಸೈಲೆಂಟ್ ಆದ ಹಿಂದೂ ಹುಲಿ ಯತ್ನಾಳ್
ಬೆಂಗಳೂರು : ಸ್ವಪಕ್ಷದ ವಿರುದ್ಧ ತೊಡೆತಟ್ಟಿದ್ದ ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬುಧವಾರ ಕೇಂದ್ರ ಶಿಸ್ತು ಸಮಿತಿ ಮುಂದೆ ಹಾಜರಾದ ನಂತರ ಶಾಂತರಾಗಿದ್ದಾರೆ.
ಯತ್ನಾಳ್ ನಿರಂತರವಾಗಿ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುತ್ತಿದ್ದ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿ ಯತ್ನಾಳ್ ಅವರಿಗೆ ಹತ್ತು ದಿನದಲ್ಲಿ ಉತ್ತರಿಸುವಂತೆ ತಾಕೀತು ಮಾಡಿತ್ತು.
ಶೋಕಾಸ್ ನೋಟಿಸ್ ಗೆ ಖುದ್ದು ದೆಹಲಿಗೆ ತೆರಳಿ ಯತ್ನಾಳ್ ಕಾರಣ ನೀಡಿದ್ದಾರೆ. ಒಂದುವರೆ ಗಂಟೆಗಳ ವರೆಗೆ ಶಿಸ್ತು ಕಮಿಟಿ ಮುಂದೆ ಹಾಜರಿದ್ದ ಯತ್ನಾಳ್ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ಆರೋಪಗಳ ಸುರಿಮಳೆಗೈದಿದ್ದಾರೆ.
ಇನ್ನೂ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಟಕ್ ಯತ್ನಾಳ್ ಭೇಟಿ ವೇಳೆ ಪಕ್ಷದ ವಿರುದ್ಧ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಖಡಕ್ ವಾರ್ನಿಂಗ್ ನೀಡಿದ್ದು ಯತ್ನಾಳ್ ಮಾತಿಗೆ ಬ್ರೆಕ್ ಹಾಕಿದ್ದಾರೆ.
ಕೇಂದ್ರ ನಾಯಕರ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್. ಎಲ್ಲಾ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದ್ದೇನೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಚರ್ಚಿಸುವ ಸಲಹೆ ನೀಡಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ಗಮನಹರಿಸುವಂತೆ ತಿಳಿಸಿದ್ದಾರೆ ಎಂದು ಯತ್ನಾಳ್ ಹೇಳಿಕೆ ನೀಡಿದರು.