ಬೆಳಗಾವಿ : ಕಳೆದ ಏಳು ತಿಂಗಳಿನಿಂದ ಬೆಳಗಾವಿ ಮಹಾನಗರ ಪಾಲಿಕೆ ಭಾಷೆ ಹಾಗೂ ಗಡಿ ವಿಚಾರವಾಗಿ ಸಾಕಷ್ಟು ಸದ್ದು ಮಾಡುತ್ತಿದೆ. “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ಠರಾವು ಪಾಸ್ ಮಾಡುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಹೋರಾಟ ಮುಂದುವರಿಸಿವೆ.

ಕನ್ನಡಪರ ಗೊತ್ತುವಳಿ ವಿಚಾರವಾಗಿ ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಪಕ್ಷ ಗೊತ್ತುವಳಿ ಕುರಿತು ಸರಕಾರಕ್ಕೆ ಪತ್ರ ಬರೆದು ಕಾನೂನು ತೊಡಕುಗಳ ಕುರಿತು ಅಭಿಪ್ರಾಯ ಕೇಳಿತ್ತು. ನಗರಾಭಿವೃದ್ಧಿ ಇಲಾಖೆ‌ ಕಾರ್ಯದರ್ಶಿಗಳು ಈ ಕುರಿತು ಪತ್ರವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ಕಳುಹಿಸಿದ್ದಾರೆ.

ಪಾಲಿಕೆ ಕೇಳಿದ ಪ್ರಶ್ನೆಗೆ ಸರಕಾರದಿಂದ ಸಮರ್ಪಕ ಉತ್ತರ ಬಂದಿಲ್ಲ. ಕೇಳಿರುವ ವಿಷಯ ಬಿಟ್ಟು ಸರಕಾರ ಪುರಾಣ ಹೇಳುವ ಕೆಲಸ ಮಾಡಿದೆ. 1988 ರ ವಿಧಾನಸಭಾ ಅಧಿವೇಶದಲ್ಲಿ ನಡೆದ ಒಂದು ಪ್ರಸಂಗವನ್ನು ಉಲ್ಲೇಖಿಸಿ ಸರಕಾರ ಉತ್ತರ ನೀಡಿದೆ. ಮಹಾಜನ್ ವರದಿ ಆಯೋಗದ ಜಾರಿ ಕುರಿತು ಕೇಂದ್ರ ಸರಕಾರವನ್ನು ಆಗ್ರಹಿಸಿ ತಂದ ಬಿಲ್ ಕುರಿತು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಸರಿ ಪ್ರಶ್ನೆಗೆ ಸರಕಾರದ ತಪ್ಪು ಉತ್ತರ :

ಸಧ್ಯ ಸರಕಾರ ಕೊಟ್ಟ ಉತ್ತರವನ್ನು ಸರಿ ಎಂದು ಭಾವಿಸಿ ಕನ್ನಡಪರ ಸಂಘಟನೆಗಳು ಸಂಭ್ರಮಾಚರಣೆ ಮಾಡುತ್ತಿವೆ. ಸರಕಾರ ಯಾವುದೋ ಒಂದು ಮಹತ್ತರ ಕೆಲಸ‌ ಮಾಡಿದಂತೆ ಬಿಂಬಿಸಲಾಗುತ್ತಿದೆ. ಅಸಲಿಗೆ ರಾಜ್ಯ ಸರಕಾರ ಗಡಿ ಹಾಗೂ ಭಾಷೆ ವಿಚಾರವಾಗಿ ಕನ್ನಡಿಗರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಾ ಬಂದಿರುವುದನ್ನು ಜನ ಮರೆತಿಲ್ಲ.

ಇಲ್ಲಿ ಪಾಲಿಕೆ ಕೇಳಿದ್ದು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಲು ಇರುವ ಕಾನೂನಾತ್ಮಕ ತೊಡಕಿನ ಕುರಿತು. ಆದರೆ ಸರಕಾರದ ಉತ್ತರ ಬಂದಿದ್ದು ಬೇರೆಯದೇ. ಮಹಾಜನ ವರದಿ ಕುರಿತು ದಶಕಗಳಿಂದ ಜನರ ಆಗ್ರಹದಂತೆ ಈವರೆಗೆ ಅನುಷ್ಠಾನ ಆಗಿಲ್ಲ. ಈವರೆಗೂ ನಮ್ಮನ್ನು ಆಳಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕುರಿತು ನ್ಯಾಯ ಒದಗಿಸುವ ಕೆಲಸ‌ ಮಾಡಿಲ್ಲ. ಈಗ ಇದೇ ವಿಚಾರವಾಗಿ ಸರಕಾರ ಹಾಸ್ಯಾಸ್ಪದ ಉತ್ತರ ನೀಡುವ ಮೂಲಕ ಮತ್ತೊಮ್ಮೆ ಕನ್ನಡಿಗರ ಮುಂದೆ ಬೆತ್ತಲಾಗಿದೆ.

ಸರಕಾರದ ಸಮರ್ಪಕ ಉತ್ತರಕ್ಕೆ ಸಿಹಿ ಹಂಚಿ ಸಂಭ್ರಮ :

ಬೆಳಗಾವಿ ಮಹಾನಗರ ಪಾಲಿಕೆ ವಿಚಾರವಾಗಿ ಸಧ್ಯ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತಾಗಿದೆ. ಸರಕಾರ ಕೊಟ್ಟ ಸಮರ್ಪಕ ಉತ್ತರವನ್ನೇ ಹಿಡಿದು ಕನ್ನಡಪರ ಸಂಘಟನೆಗಳು ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿವೆ. ಇದೆಲ್ಲಾ ಬೇಕಿತ್ತಾ ಎಂಬ ಪ್ರಶ್ನೆಗೆ ಯಾರ ಬಳಿಯೂ ಸಮರ್ಪಕ ಉತ್ತರ ಇಲ್ಲ. ಆದರೆ ಯಾಕಿಷ್ಟು ಹಠಕ್ಕೆ ಬಿದ್ದು ಇಂತಹ ನಿರ್ಧಾರಗಳು ಎಂದು ಪ್ರಶ್ನಿಸಿದರೆ ಎಲ್ಲರಿಗೂ ವೈಯಕ್ತಿಕ ಸ್ವಾರ್ಥ ಎಂಬುವುದಂತು ಸ್ಪಷ್ಟವಾಗಿ ಗೋಚರಿಸುತ್ತದೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಿಗೆ ಸರಕಾರ ಬರೆದ ಪತ್ರದಲ್ಲಿ ತಲೆನೋವು ನಮ್ಮ ಬಳಿ ತರಬೇಡ ದೇವ್ರು ಎಂದು ಹೇಳಿದಂತಿದೆ. ಸೂಕ್ಷ್ಮ ವಿಷಯ ಎಂದು ಉಲ್ಲೇಖಿಸಿ ಇದು ಅಲ್ಲಿಯೇ ಬಗೆಹರಿಸಿ ಎಂಬ ಮಾತು ಆಡಿದೆ. ಇಂತಹ ವಿಷಯಗಳಲ್ಲಿ ಸರಕಾರ ಮಧ್ಯಪ್ರದೇಶ ಮಾಡಿ ಸಮಸ್ಯೆ ಬಗೆಹರಿಸುವ ಶಕ್ತಿ ತೋರಿಸುವ ಬದಲು, ಸಮಸ್ಯೆ ನಮ್ಮ ಬಳಿ ಬರುವುದು ಬೇಡ ಎಂಬ ಅರ್ಥದಲ್ಲಿ ಬೆದರಿಸುವ ಪತ್ರ ಬರೆಯುವುದನ್ನು ನೋಡಿದರೆ ಇವರಿಗೆ ಕನ್ನಡದ ಮೇಲೆ ಇರುವ ಪ್ರೀತಿ ಎಂತಹದು ಎಂದು ಎಲ್ಲರಿಗೂ ಕಾಣಿಸುತ್ತಿದೆ.

ಪಾಲಿಕೆಗೆ ಯಾಕಿಷ್ಟು ಹಠ..?

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಯಾಕೆ ಇಷ್ಟು ಹಠ ಹಿಡಿದಿದೆ ಎಂಬ ಪ್ರಶ್ನೆಯೂ ಹಲವರನ್ನು ಕಾಡುತ್ತಿದೆ. ಇವಕ್ಕೆಲ್ಲ ಮುಖ್ಯ ಕಾರಣ ಮತಬ್ಯಾಂಕ್. ಕನ್ನಡಪರ ಗೊತ್ತುವಳಿ ಮಂಡಿಸಿದರೆ ಬಿಜೆಪಿಗೆ ಒಂದು ವರ್ಗದ ಮತಗಳು ಕೈತಪ್ಪುವ ಭೀತಿಯೂ ಇದೆ. ಈ ಎಲ್ಲಾ ಕಾರಣಕ್ಕೆ ಅಡಳಿತ ಪಕ್ಷ ಬಿಜೆಪಿ ಕನ್ನಡಪರ ಗೊತ್ತುವಳಿಗೆ ಹಿಂದೇಟು ಹಾಕುತ್ತಿರುವುದು ಸತ್ಯ. ಎಂಇಎಸ್ ಪುಂಡಾಟಿಕೆ ಸಂಪೂರ್ಣ ನೆಲಕಚ್ಚಿದ್ದು ಮಾಲಿಕೆಯಲ್ಲಿ ಸಧ್ಯ ಕನ್ನಡದ ವಾತಾವರಣ ಮನೆ ಮಾಡಿದೆ. ಈ ಸಂದರ್ಭದಲ್ಲಿ ಅನವಶ್ಯಕ ಗೊಂದಲ ಏಕೆ ಎಂಬುವುದು ಒಂದು ವರ್ಗದ ವಾದವಾಗಿರುವುದು ಸುಳ್ಳಲ್ಲ.

ಅಭಿವೃದ್ಧಿ ಶೂನ್ಯ ;;;;;; ಜನರ ಬದುಕಿನ ಜೊತೆ ಆಟ :

ಬೆಳಗಾವಿ ಮಹಾನಗರ ಪಾಲಿಕೆ ಯಾವತ್ತೂ ಅಭಿವೃದ್ಧಿ ವಿಚಾರವಾಗಿ ಸುದ್ದಿಯಾಗಿಲ್ಲ. ಕೇವಲ ಅನವಶ್ಯಕ ವಿಷಯಗಳೇ ಇಲ್ಲಿ ವಿಜೃಂಭಣೆ ಮಾಡುತ್ತವೆ. ಬೆಳಗಾವಿ ಮಹಾನಗರದ ಜನರಿಗೆ ಬೇಕಿರುವುದು ಅಭಿವೃದ್ಧಿ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನ ಇನ್ನೂ ನಲುಗುವ ಪರಿಸ್ಥಿತಿ ಇದೆ. ಇವೆಲ್ಲವನ್ನೂ ಗಮನಿಸಿ ಸರಕಾರ ಅನುದಾನ ನೀಡಿ ಜನರ ಬೇಡಿಕೆಗೆ ಸ್ಪಂದಿಸಬೇಕಿದೆ. ಇನ್ನೂ ಪಾಲಿಕೆಯ ಆಡಳಿತ ಪಕ್ಷವೂ ರಾಜಕೀಯ ಉಸಾಬರಿ ಬದಿಗೊತ್ತಿ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ. ಇನ್ನೂ ಸಂಘಟನೆಗಳು ಈ ಕುರಿತು ಪ್ರಾಮಾಣಿಕ ಹೋರಾಟ ಮಾಡಿ ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಿದರೆ ಮಾತ್ರ ಜನರಿಗೆ ಉಪಯೋಗ. ಇಲ್ಲವಾದರೆ ಅದೇ ಗೋಳು..!