ಡಿಸಿಸಿ ಕುರ್ಚಿ ಕಾಳಗ ; ಹಿಂದೆ ಸರಿದ ಹಟ್ಟಿಹೊಳಿ, ನಾನು ಸ್ಪರ್ಧಿಸುವೆ ಎಂದ ಹಲಗೇಕರ್..!
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಸ್ಪರ್ಧೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬೆಳಗಾವಿ : ರಾಜ್ಯದಲ್ಲಿಯೇ ರೈತರಿಗೆ ಅತಿ ಹೆಚ್ಚು ಸಾಲ ನೀಡಿದ ಹೆಗ್ಗಳಿಕೆ ಹೊಂದಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ( ಬಿಡಿಸಿಸಿ ) ಬ್ಯಾಂಕ್ ಚುನಾವಣೆ ಅಕ್ಟೋಬರ್ 19 ಕ್ಕೆ ನಡೆಯಲಿದೆ. ಈ ಬಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಭರ್ಜರಿ ತಯಾರಿ ನಡೆಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಹೋದರ ಹಾಗೂ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಫರ್ಧೆಯಿಂದ ದೂರ ಸರಿದು ಅಚ್ಚರಿ ಮೂಡಿಸಿದ್ದಾರೆ.
ಖಾನಾಪುರದಿಂದ ಚುನಾವಣಾ ಸ್ಫರ್ಧೆಗೆ ಭರ್ಜರಿ ತಯಾರಿ ನಡೆಸಿದ್ದ ಹಟ್ಟಿಹೊಳಿ ಅವರು ಕೆಲ ಸೊಸೈಟಿ ಮತಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಬುಧವಾರ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆ ನಡೆದ ಮಾತುಕತೆ ನಂತರ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ಸ್ವತಃ ಸಚಿವ ಸತೀಶ್ ಜಾರಕಿಹೊಳಿ ಅವರು ಚನ್ನರಾಜ ಹಟ್ಟಿಹೊಳಿ ಸ್ಪರ್ಧೆ ಮಾಡುವುದಿಲ್ಲ ಮುಂಬರುವ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಜಾರಕಿಹೊಳಿ ಸಹೋದರರ ವಿರುದ್ಧ ರಮೇಶ್ ಕತ್ತಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಜಿಲ್ಲೆಯ ಲಿಂಗಾಯತ ಮುಖಂಡರ ಸಭೆ ಮಾಡಿದ್ದರು. ಈ ಸಭೆಯಲ್ಲಿ ಸ್ವತಃ ಚನ್ನರಾಜ ಹಟ್ಟಿಹೊಳಿ ಅವರೂ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸ್ಫರ್ಧೆಯಿಂದ ಹಟ್ಟಿಹೊಳಿ ಹಿಂದೆ ಸರಿಯುವ ಅಚ್ಚರಿ ನಿರ್ಧಾರ ಕೈಗೊಂಡಿದ್ದು ಡಿಸಿಸಿ ಬ್ಯಾಂಕ್ ಚುನಾವಣಾ ಸಮೀಕರಣವೇ ಬದಲಾಗಿದೆ.
ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ತಗೆದುಕೊಂಡಿರುವ ಜಾರಕಿಹೊಳಿ ಸಹೋದರರು ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯಲ್ಲಿ ತನ್ನದೇ ಪ್ರಾಭಲ್ಯ ಹೊಂದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ವಿರೋಧ ಮಾಡದೇ ಮಾತುಕತೆ ಮೂಲಕ ಚುನಾವಣಾ ರಣತಂತ್ರ ಹೆಣೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಸರಕಾರದಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಸಚಿವರಾಗಿದ್ದು ಡಿಸಿಸಿ ಬ್ಯಾಂಕ್ ಚುನಾವಣೆ ನೆಪದಲ್ಲಿ ಸರಕಾರಕ್ಕೆ ಯಾವುದೇ ತೊಂದರೆ ಆಗದಂತೆ ಚುನಾವಣೆ ಎದುರಿಸುವ ಹೆಜ್ಜೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ಕಳೆದ ನಾಲ್ಕೆದು ತಿಂಗಳಿನಿಂದ ಚನ್ನರಾಜ ಹಟ್ಟಿಹೊಳಿ ಖಾನಾಪುರ ತಾಲೂಕಿನಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದರು.
ಖಾನಾಪುರದ ಪಿಕೆಪಿಎಸ್ ನಿರ್ದೇಶಕರ ಮನ ಗೆಲ್ಲಲು ಯಶಸ್ವಿಯಾಗಿದ್ದರು. ಜಿಲ್ಲೆಯ ರಾಜಕಾರಣ ಹಾಗೂ ರಾಜಕೀಯ ದೃಷ್ಟಿಯಿಂದ ಇವರು ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ. ಚುನಾವಣೆ ಕಣದಿಂದ ಚನ್ನರಾಜ ಹಿಂದೆ ಸರಿದಿದ್ದೇಕೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವೆ ಎಂದು ಸತೀಶ್ ಜಾರಕಿಹೊಳಿ
ಹೇಳಿದ್ದಾರೆ.
ಈ ಕುರಿತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ. ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಸ್ಪರ್ಧೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಗುರುವಾರ ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಕಳೆದ ಆರು ತಿಂಗಳನಿಂದ ಖಾನಾಪುರ ಪಿಕೆಪಿಎಸ್ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದೇವು. ಅದು ಸತ್ಯ. ಸಾಕಷ್ಟು ಸೊಸೈಟಿ ಮುಂದೆ ಬಂದು ಬೆಂಬಲ ಸೂಚಿಸಿದ್ದರು ಎಂದರು.
ಅಖಾಡಕ್ಕೆ ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ : ಖಾನಾಪುರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ಸ್ಫರ್ಧೆಯಿಂದ ಚನ್ನರಾಜ ಹಟ್ಟಿಹೊಳಿ ಅವರಿಗೆ ಶಾಸಕ ವಿಠ್ಠಲ ಹಲಗೇಕರ್ ಬೆಂಬಲ ನೀಡಿದ್ದರು. ಆದರೆ ದಿಢೀರ್ ಹಟ್ಟಿಹೊಳಿ ಹಿಂದೆ ಸರಿದ ಪರಿಣಾಮ ಈಗ ಶಾಸಕ ಹಲಗೇಕರ್ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸ್ಪರ್ಧೆ ಖಚಿತ ಎಂದು ಹೇಳಲಾಗುತ್ತಿದ್ದು ಇತ್ತ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ಅರವಿಂದ ಪಾಟೀಲ ಸ್ಪರ್ಧಿಸುತ್ತಿದ್ದಾರೆ. ಇತ್ತ ಶಾಸಕ ವಿಠ್ಠಲ ಹಲಗೇಕರ್ ಸ್ಪರ್ಧೆಗೆ ತಯಾರಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
**********
ಜಿಲ್ಲೆಯ ರಾಜಕೀಯ ಪರಿಸ್ಥಿತಿ ಮತ್ತು ಡಿಸಿಸಿ ಬ್ಯಾಂಕ್ ಮುಂದೆ ಯಾವ ರೀತಿ ನಡೆಸಬೇಕು ಎಲ್ಲ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ನಾವು ಒಂದು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ.
ಚನ್ನರಾಜ ಹಟ್ಟಿಹೊಳಿ
ವಿಧಾನ ಪರಿಷತ್ ಸದಸ್ಯ


