
“ಬೆಳಗಾವಿ ವಾಯ್ಸ್” ಲೋಕಾರ್ಪಣೆ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಸಮಗ್ರ ಸುದ್ದಿಗಳನ್ನು ಜನರಿಗೆ ತಲುಪಿಸುವ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಪ್ರಾರಂಭವಾದ ಬೆಳಗಾವಿ ವಾಯ್ಸ್ ಮಾಧ್ಯಮ ಸಂಸ್ಥೆಗೆ ಇಂದು ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಚಾಲನೆ ನೀಡಲಾಯಿತು.
ಗುರುವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಡಾ. ವಿಕ್ರಂ ಆಮಟೆ ಅವರಿಂದ ಬೆಳಗಾವಿ ವಾಯ್ಸ್ ಸುದ್ದಿ ಸಂಸ್ಥೆ ಉದ್ಘಾಟನೆಗೊಂಡಿತು.

ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯ ಅತಿಥಿಗಳಾದ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ವಿಕ್ರಂ ಆಮಟೆ ಮಾತನಾಡಿ. ಪ್ರಸ್ತುತ ದಿನಮಾನಗಳಲ್ಲಿ ನಿಖರ ಹಾಗೂ ವಸ್ತುನಿಷ್ಠ ಸುದ್ದಿಗಳ ಕೊರತೆ ಎದ್ದು ಕಾಣಿಸುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಕೋನದಿಂದ ಪತ್ರಕರ್ತರು ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಬೆಳಗಾವಿ ವಾಯ್ಸ್ ತಂಡ ತಮ್ಮ ಕಾರ್ಯ ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ. ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಿಂದ ಸಾಕಷ್ಟು ಹಿಂದೆ ಉಳಿದಿದ್ದು ಆ ನಿಟ್ಟಿನಲ್ಲಿ ಸರ್ಕಾರಗಳು ತಮ್ಮ ಕಾರ್ಯ ಮಾಡಬೇಕಾಗಿದೆ. ಜೊತೆಗೆ ನಮ್ಮ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಬೇಕಾಗಿದೆ. ಆ ಕಾರ್ಯವನ್ನು ಬೆಳಗಾವಿ ವಾಯ್ಸ್ ಮಾಡಲಿದೆ ಎಂದು ಆಶೀರ್ವಾದ ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಖ್ಯಾತ ಮೂತ್ರಪಿಂಡ ತಜ್ಞರಾದ ಚಿಕ್ಕೋಡಿ ಸತ್ಯಸಾಯಿ ಆಸ್ಪತ್ರೆಯ ಡಾ. ಅಭಿಜಿತ್ ಮುಸಾಳೆ ಮಾತನಾಡಿ ಈ ಯುವ ಪತ್ರಕರ್ತರ ತಂಡ ಸೇರಿಕೊಂಡು ಪ್ರಾರಂಭಿಸಿರುವ ಬೆಳಗಾವಿ ವಾಯ್ಸ್ ಸುದ್ದಿ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಆಶಿಸಿದರು. ಬೆಳಗಾವಿ ವಾಯ್ಸ್ ಸಂಪಾದಕ ಗಿರೀಶ್ ಬಡಿಗೇರ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಹಾಗೂ ನಮ್ಮ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡಲಿದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಹಸಿದವರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡಿದ್ದ ಯುವ ಮುಖಂಡ ನಾಗರಾಜ ಗಸ್ತಿ ಅವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಬುಡಾ ಎಂಜಿನಿಯರ್ ಎಂ.ವಿ.ಹಿರೇಮಠ ಬೆಳಗಾವಿ ಉತ್ತರ ಬಿಜೆಪಿ ಯುವಾ ಮೋರ್ಚಾ ಅಧ್ಯಕ್ಷರಾದ ಸದಾನಂದ ಗುಂಟೆಪ್ಪನವರ, ಕಾಂಗ್ರೆಸ್ ಮುಖಂಡ ಅಮೀತ್ ರಜಪೂತ, ಉದ್ಯಮಿ ಪಾರ್ಶ್ವನಾಥ ಕೊಕಟನೂರ, ರಿತಿಕಾ ಹೆಗಡಿ, ಸಿದ್ದಪ್ರಸಾದ ನಾಟೆಕರ್, ರೇವಣಸಿದ್ದ ಪೂಜಾರಿ, ಕಾಶಿನಾಥ ಗೌಡರ್
ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.