ಸ್ವಂತ ಖರ್ಚಿನಲ್ಲಿ ಶಾಲಾ ಮಕ್ಕಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದೊಯ್ದ ಶಿಕ್ಷಕ
ಬೆಳಗಾವಿ : ಸಾಮಾನ್ಯವಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯುವುದು ಮಾಮೂಲಿ. ಆದರೆ ಇಲ್ಲೊಬ್ಬ ಸರ್ಕಾರಿ ಶಾಲಾ ಶಿಕ್ಷಕ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ವಿಮಾನದ ಮೂಲಕ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.
ಬೆಳಗಾವಿ ತಾಲೂಕಿನ ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 17 ವಿದ್ಯಾರ್ಥಿಗಳನ್ನು ಶಿಕ್ಷಕ ಪ್ರಕಾಶ ದೇಯಣ್ಣವರ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ತರಗತಿಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ಶಿಕ್ಷಕ ಪ್ರಕಾಶ್ ಮಕ್ಕಳಿಗೆ ಒಂದು ಮಾತು ಕೊಟ್ಟಿದ್ದರು. ರಜೆ ಮಾಡದೆ ಯಾರು ಶಾಲೆಗೆ ಬರುತ್ತೀರಿ ಅವರಿಗೆ ವಿಮಾನಯಾನ ಮಾಡಿಸುವ ಉದ್ದೇಶ ಹೇಳಿಕೊಂಡಿದ್ದರು. ಸರ್ಕಾರಿ ಶಾಲೆ ಮಕ್ಕಳನ್ನು ಪ್ರೋತ್ಸಾಹಿಸಿ ಹಾಜರಾತಿ ಹೆಚ್ಚಿಸುವ ಉದ್ದೇಶ ಈ ಪ್ರವಾಸದ ಹಿಂದೆ ಅಡಗಿತ್ತು.
ಕೊಟ್ಟ ಮಾತಿನಂತೆ ಶಾಲೆಯ 17 ಜನ ವಿದ್ಯಾರ್ಥಿಗಳನ್ನು ಶಿಕ್ಷಕ ಪ್ರಕಾಶ್ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಹೈದಾರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ಮೊದಲಬಾರಿಗೆ ವಿಮಾನದಲ್ಲಿ ಸಂಚರಿಸಿದ ಮಕ್ಕಳು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ.
ಹೈದಾರಾಬಾದ್ ಪ್ರವಾಸಕ್ಕೆ ಒಟ್ಟು 2.50 ಲಕ್ಷ ರೂ. ಖರ್ಚಾಗುತ್ತಿದ್ದು, ಇದರಲ್ಲಿ 2 ಲಕ್ಷ ರೂ. ಶಿಕ್ಷಕ ಪ್ರಕಾಶ ದೇಯಣ್ಣವರ ಅವರೇ ಭರಿಸುತ್ತಿದ್ದಾರೆ. ಇನ್ನುಳಿದ ಹಣವನ್ನು ವಿದ್ಯಾರ್ಥಿಗಳಿಂದ ತಲಾ 3 ಸಾವಿರ ರೂ. ಪಡೆದಿದ್ದಾರೆ. ಆದರೆ ಒಬ್ಬ ಸರ್ಕಾರಿ ಶಾಲೆ ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಇದೇ ಸ್ಪಷ್ಟ ನಿದರ್ಶನ.


